ಮುಂಬೈ: ಪುರುಷರ ಐಪಿಎಲ್ ಟೂರ್ನಿ 14 ಆವೃತ್ತಿ ಯಶಸ್ವಿ ಕಂಡು 15ನೇ ಆವೃತ್ತಿ ನಡೆಯುತ್ತಿರುವಂತೆ ಇದೀಗ 2023ರಲ್ಲಿ 6 ತಂಡಗಳೊಂದಿಗೆ ಮಹಿಳಾ ಐಪಿಎಲ್ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ ಎಂದು ವರದಿಯಾಗಿದೆ.
ಈ ಹಿಂದೆ 3 ತಂಡಗಳ ನಡುವೆ ಮಹಿಳಾ ಟಿ20 ಚಾಲೆಂಜ್ ಹೆಸರಿನಡಿ ಐಪಿಎಲ್ ವೇಳೆ ಮಹಿಳಾ ತಂಡಗಳನ್ನು ಬಿಸಿಸಿಐ ಆಡಿಸಿತ್ತು. ಆ ಬಳಿಕ 2021ರಲ್ಲಿ ಕೊರೊನಾದಿಂದಾಗಿ ಇದು ರದ್ದುಗೊಂಡಿತ್ತು. ಇದೀಗ ನಡೆಯುತ್ತಿರುವ 15ನೇ ಆವೃತ್ತಿ ಐಪಿಎಲ್‍ನಲ್ಲೂ ಈ ಮಹಿಳಾ ಟಿ20 ಚಾಲೆಂಜ್ ನಡೆಯುತ್ತಿಲ್ಲ. ಆದರೆ 2023ರಲ್ಲಿ ಆರಂಭವಾಗುವ ಐಪಿಎಲ್ ವೇಳೆ 6 ಮಹಿಳಾ ತಂಡಗಳನ್ನು ರಚಿಸಿ ಮಹಿಳಾ ಐಪಿಎಲ್ ಆರಂಭಿಸಲು ಸಿದ್ಧತೆ ಆರಂಭಗೊಂಡಿದೆ ಎಂದು ಬಿಸಿಸಿಐ ಮೂಲಗಳು ಖಚಿತ ಪಡಿಸಿದೆ. ಇದನ್ನೂ ಓದಿ: 6 ಸಿಕ್ಸ್, 8 ಫೋರ್ ಚಚ್ಚಿ ಮಿಲ್ಲರ್ ಮಿಂಚಿಂಗ್ – ಗುಜರಾತ್‍ಗೆ ರೋಚಕ ಜಯ
ಈಗಾಗಲೇ ಮಹಿಳಾ ಐಪಿಎಲ್ ಟೂರ್ನಿ ಬಗ್ಗೆ ಮಾತುಕತೆ ನಡೆದಿದ್ದು 6 ತಂಡಗಳ ರಚನೆಗೆ ರೂಪುರೇಷೆ ಸಿದ್ಧಗೊಂಡಿದೆ. ಜೊತೆಗೆ ಇದೀಗ ಪುರುಷರ ಐಪಿಎಲ್‍ನಲ್ಲಿರುವ ಕೆಲ ಫ್ರಾಂಚೈಸ್‍ಗಳು ಮಹಿಳಾ ಐಪಿಎಲ್ ತಂಡ ಕಟ್ಟಲು ತಯಾರಾಗಿದೆ. ಹಾಗಾಗಿ ಮುಂದಿನ ವರ್ಷದಿಂದ ಮಹಿಳಾ ಐಪಿಎಲ್ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಪರ ಟಿ20 ವಿಶ್ವಕಪ್ ಆಡುವರೇ ದಿನೇಶ್ ಕಾರ್ತಿಕ್?
ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಆಯೋಜಿಸುವ ಬಿಗ್‍ಬಾಶ್ ಲೀಗ್ ವೇಳೆ ಮಹಿಳಾ ಬಿಗ್‍ಬಾಶ್ ಲೀಗ್ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಐಪಿಎಲ್‍ನಲ್ಲೂ ಮಹಿಳಾ ತಂಡಗಳನ್ನು ಆಡಿಸುವ ಲೆಕ್ಕಾಚಾರದಲ್ಲಿ ಬಿಸಿಸಿಸಿ ಇದೆ. ಬಿಗ್‍ಬಾಶ್‍ನಲ್ಲಿ ಭಾರತೀಯ ಮಹಿಳಾ ಆಟಗಾರರು ಕೂಡ ಭಾಗವಹಿಸಿದ್ದಾರೆ. ಅದೇ ರೀತಿ 2023ರಲ್ಲಿ ವಿದೇಶಿ ಆಟಗಾರರನ್ನು ಬರಮಾಡಿಕೊಂಡು ಮಹಿಳಾ ಐಪಿಎಲ್ ನಡೆಸಲು ಸಿದ್ಧತೆ ಆರಂಭಗೊಂಡಿದೆ ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.