ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನಡೆದ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೇಸರಿ ಶಾಲು ಧರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಹನುಮ ಜಯಂತಿ ನಿಮಿತ್ತ ಕನಕಗಿರಿ ಕ್ಷೇತ್ರದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಹನುಮ ಮಾಲೆ ಹಾಕಿದ್ದಾರೆ. ಇದನ್ನು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ವಿಸರ್ಜನೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿವರಾಜ ತಂಗಡಗಿ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದಾರೆ.
ಹೀಗಾಗಿ ಮಾರ್ಗ ಮಧ್ಯೆ ಗಂಗಾವತಿಯ ಚನ್ನಬಸವ ತಾತನ ದೇವಸ್ಥಾನದಲ್ಲಿ ಶಿವರಾಜ ತಂಗಡಗಿ ಹಾಗೂ ಸಂಗಡಿಗರನ್ನು ಇಕ್ಬಾಲ್ ಅನ್ಸಾರಿ ಹಾಗೂ ಅವರ ಬೆಂಬಲಿಗರು ಸ್ವಾಗತಿಸಿದ್ದಾರೆ. ಬಳಿಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಶಾಸಕ ಅಮರೇಗೌಡ ಭಯ್ಯಾಪೂರ್, ಮಾಜಿ ಸಂಸದ ಶಿವರಾಮೇಗೌಡ, ಕ್ರಿಶ್ಚಿಯನ್ ಪಾದ್ರಿಗಳು ಸೇರಿದಂತೆ ಇತರ ಮುಸ್ಲಿಂ ಬಾಂಧವರು ಕೇಸರಿ ಶಾಲು ಧರಿಸಿದರು. ಇದನ್ನೂ ಓದಿ: ಹಿಂದೂ, ಮುಸ್ಲಿಮರ ಮಧ್ಯೆ ಮತ-ಭೇದ ಪ್ರಾರಂಭವಾಗೋದಕ್ಕೆ ಈ 6 ವಿದ್ಯಾರ್ಥಿನಿಯರೇ ಕಾರಣ: ರಘುಪತಿ ಭಟ್
ಈ ವೇಳೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿ, ಸಮಾಜದಲ್ಲಿ ಇಂದು ಮನಸ್ಸುಗಳು ಕೆಡುವಂತಹ ವಾತಾವರಣ ಸೃಷ್ಟಿಯಾಗಿದೆ. ಯಾರು ಯಾವ ಬಣ್ಣದ ಶಾಲನ್ನಾದರೂ ಧರಿಸಬಹುದು. ಜೊತೆಗೆ ನಾವೆಲ್ಲರೂ ಮಾನವೀಯತೆಯ ಧರ್ಮ ಪಾಲಿಸಬೇಕೆಂದು ಹೇಳಿದರು.
ಈ ಹಿಂದೆ ಇವರ ತಂದೆಯವರಾದ ದಿವಂಗತ ಎಂ.ಎಸ್. ಅನ್ಸಾರಿ ಸಹ ಭಾವೈಕ್ಯ ನಿಧಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಅವರ ಪುತ್ರರಾದ ಇಕ್ಬಾಲ್ ಅನ್ಸಾರಿ ಸಹ ಕೇಸರಿ ಶಾಲು ಹಾಕುವ ಮೂಲಕ ಭಾವೈಕ್ಯತೆ ಸಾರಿದ್ದಾರೆ. ಇದನ್ನೂ ಓದಿ: ಧರ್ಮ ದಂಗಲ್‌ಗೆ ನಾವು ಕಾರಣರಲ್ಲ: ಹಿಜಬ್ ಪರ ವಿದ್ಯಾರ್ಥಿನಿಯರು