ಬೆಂಗಳೂರು: ಪ್ರೀತಿಗಾಗಿ, ನಂಬಿದವಳಿಗಾಗಿ ಕೆಲವರು ಯಾವ ತ್ಯಾಗಕ್ಕೂ ಕೂಡ ಸಿದ್ಧರಿರ್ತಾರೆ. ಅಂತೆಯೇ ಇಲ್ಲೊಬ್ಬ ಪ್ರೀತಿಸಿ ಮದುವೆಯಾದವಳನ್ನ ಚೆನ್ನಾಗಿ ನೋಡ್ಕೊಬೇಕು ಅಂತಾ ರಾಜ್ಯ ಬಿಟ್ಟು ರಾಜ್ಯಕ್ಕೆ ಹೋಗಿ ಸರಗಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿಯನ್ನು ಉಮೇಶ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ರಾಜಸ್ಥಾನದವನು. ಈತನಿಗೆ ಪತ್ನಿ ಅಂದ್ರೆ ಎಲ್ಲಿಲ್ಲದ ಪ್ರೀತಿ. ಲವ್ ಮ್ಯಾರೇಜ್ ಆಗಿದ್ದ ಈತನಿಗೆ ಪತ್ನಿ ಏನೇ ಕೇಳಿದ್ರೂ ಅವ್ಳ ಆಸೆ ಈಡೇರಿಸೋ ಖಯಾಲಿ. ಹೆಂಡ್ತಿ ಮೇಲಿನ ಪ್ರೀತಿಗೆ ಹಿಡಿದಿದ್ದು ಕಳ್ಳತನದ ದಾರಿ.
ಆರೋಪಿ ಉಮೇಶ್ ಅಂತರಾಜ್ಯ ಖದೀಮ. ರಾಜಸ್ಥಾನದಿಂದ ವಿಮಾನದಲ್ಲೇ ಬರುತ್ತಿದ್ದ ಇವನು ಒಮ್ಮೆ ಬೆಂಗಳೂರಲ್ಲಿ, ಮತ್ತೊಮ್ಮೆ ಹೈದ್ರಾಬಾದಲ್ಲಿ ತನ್ನ ಕೈಚಳಕ ತೋರಿಸ್ತಿದ್ದ. ಬೈಕ್ ಕಳ್ಳತನ ಮಾಡೋದು. ಅದೇ ಬೈಕಲ್ಲಿ ಬಂದು ಮಾಂಗಲ್ಯ ಸರ ಎಗರಿಸಿ ಎಸ್ಕೇಪ್ ಆಗ್ತಿದ್ದ. ಹೀಗೆ ಇವನ ವಿರುದ್ಧ ಬೆಂಗಳೂರಿನಲ್ಲಿ 7, ರಾಜಸ್ಥಾನದಲ್ಲಿ 18 ಹಾಗೂ ನೆರೆಯ ಹೈದರಾಬಾದ್‍ನಲ್ಲಿ 8 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಜಿಮ್‍ನಲ್ಲಿ ಮಹಿಳೆ ಸಾವಿನ ಕಾರಣ ಬಯಲು – ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು
ಇತ್ತೀಚೆಗೆ ಸಿ.ಕೆ ಅಚ್ಚುಕಟ್ಟು, ಮಾರತಹಳ್ಳಿ, ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಸರಣಿ ಸರಗಳ್ಳತನವಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು 700 ಕ್ಕೂ ಹೆಚ್ಚು ಸಿಸಿಟಿವಿಯನ್ನ ತಡಕಾಡಿದ್ರು. ಎಷ್ಟೇ ಕಷ್ಟ ಪಟ್ಟು ತನಿಖೆ ನಡೆಸಿದ್ರು ಸರಗಳ್ಳನ ಒಂದೇ ಒಂದು ಮಾಹಿತಿ ಸಿಕ್ಕಿರಲಿಲ್ಲ ಕೊನೆಗೆ ಮಲ್ಲೇಶ್ವರಂನಲ್ಲಿ ಕಳುವಾಗಿದ್ದ ಬೈಕ್‍ನ ಬೆನ್ನು ಬಿದ್ದ ಪೊಲೀಸರಿಗೆ ಖದೀಮನ ಸುಳಿವು ಸಿಕ್ಕಿತ್ತು. ಪ್ರಕರಣದ ಬೆನ್ನು ಬಿದ್ದ ಪೊಲೀಸರು ಸದ್ಯ ಆರೋಪಿಯನ್ನ ಜೈಲಿಗಟ್ಟಿದ್ದಾರೆ.
ಈ ಉಮೇಶ್ ಅಪ್ರಾಪ್ತೆಯನ್ನ ಮದುವೆಯಾದ ಕಾರಣಕ್ಕೆ ಜೈಲು ಸೇರಿ ಕಂಬಿ ಸಹ ಎಣಿಸಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು, ಆರೋಪಿ ಬಳಿಯಿಂದ 4 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ – ರಕ್ತಸಿಕ್ತವಾಗಿ ಪತ್ತೆಯಾದ ಕಾರು