ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡದೇ ಶುಲ್ಕ ವಿಧಿಸಿದ ಸರ್ಕಾರ – ರೈತರು ಕಂಗಾಲು

Public TV
2 Min Read
kodagu water 1

ಮಡಿಕೇರಿ: ರಾಜ್ಯದಲ್ಲಿ ಕಾಫಿ, ಟೀ ಮತ್ತು ರಬ್ಬರ್ ಬೆಳೆಗೆ ಬಿಟ್ಟರೆ ಉಳಿದ ಎಲ್ಲಾ ವಾಣಿಜ್ಯ ಬೆಳೆಗಳಿಗೂ 10 ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತದೆ. ಆದರೆ ಎಲ್ಲಾ ಜಿಲ್ಲೆಗಳಲ್ಲಿ ರೈತರಿಗೆ 10 ಹೆಚ್‌ಪಿವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ ಕೊಡಗಿನ ರೈತರಿಗೆ ಶುಲ್ಕ ವಿಧಿಸಿ ಕಂಗಾಲಾಗುವಂತೆ ಮಾಡಿದೆ.

ಕಳೆದ ನಾಲ್ಕು ವರ್ಷಗಳಿಂದ ಕೊಡಗಿನಲ್ಲಿ ಆದ ಭಾರೀ ಮಳೆಗೆ ಕಾಫಿ ಬೆಳೆ ಸಂಪೂರ್ಣ ನಷ್ಟವಾಗಿದೆ. ನೂರಾರು ರೈತರ ಕಾಫಿ ತೋಟಗಳೇ ಭೂಕುಸಿತದಲ್ಲಿ ಕೊಚ್ಚಿ ಹೋಗಿವೆ. ಇದರಿಂದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಕಾಫಿ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರ ಜೊತೆಗೆ ಉತ್ಪಾದನಾ ವೆಚ್ಚ ತೀವ್ರವಾಗಿ ಹೆಚ್ಚಳವಾಗಿದ್ದು ಕಾಫಿ ಬೆಳೆಯಿಂದ ಲಾಭ ಪಡೆಯುವುದೇ ಕಷ್ಟಕರ ಎನ್ನುವ ಸ್ಥಿತಿ ಇದೆ. ಇದನ್ನೂ ಓದಿ: ಭಾರತದ ಎಲ್ಲಾ ವಯಸ್ಕರಿಗೂ ಬೂಸ್ಟರ್ ಡೋಸ್ – ಸರ್ಕಾರ ಚಿಂತನೆ

water pump 1

ಈಗಾಗಲೇ ರಾಜ್ಯದಲ್ಲಿ ವಾಣಿಜ್ಯ ಬೆಳೆಗಳಾದ ಅಡಿಕೆ, ಮಾವು, ಕಬ್ಬು ಮುಂತಾದ ಬೆಳೆಗಳಿಗೆ ರೈತರು ಉಪಯೋಗಿಸುತ್ತಿರುವ 10 ಹೆಚ್‌ಪಿ ಪಂಪ್ ಸೆಟ್‌ಗಳಿಗೆ ಸರ್ಕಾರದಿಂದ ಉಚಿತವಾಗಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಾರರು ಉಪಯೋಗಿಸುತ್ತಿರುವ ಪಂಪ್ ಸೆಟ್‌ಗಳಿಗೆ ವಿದ್ಯುತ್ ಶುಲ್ಕವನ್ನು ಪಾವತಿ ಮಾಡುವಂತೆ ಇಲಾಖೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ.

ಒಂದು ವೇಳೆ ಶುಲ್ಕ ಕಟ್ಟದೇ ಹೋದಲ್ಲಿ ನೂರಾರು ರೈತರ ಪಂಪ್ ಸೆಟ್‌ಗೆ ಬಳಸುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಾರೆ. ಇದರಿಂದ ನೊಂದ ಕೊಡಗಿನ ನೂರಾರು ರೈತರು ವಿದ್ಯುತ್ ಇಲಾಖೆ ಮುಂಭಾಗದಲ್ಲಿ 10 ಹೆಚ್‌ಪಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತೆ ಆಗ್ರಹಿಸಿ ಹೋರಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ 2 ದಿನ ಗುಡುಗು ಸಹಿತ ಮಳೆ

kodagu water chescom

ಉಚಿತ ವಿದ್ಯುತ್ ನೀಡುವಂತೆ ಮುಖ್ಯಮಂತ್ರಿಗಳಿಗೂ ಕೊಡಗಿನ ಕಾಫಿ ಬೆಳೆಗಾರರು ಮನವಿ ಮಾಡಿದ್ದರು. ಅದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಅದರೆ ಜಿಲ್ಲೆಯ ಚೆಸ್ಕಾಂ ಅಧಿಕಾರಿಗಳು ಮಾತ್ರ ಉಚಿತ ವಿದ್ಯುತ್ ನೀಡುತ್ತಿಲ್ಲ. ಬದಲಾಗಿ ವಿದ್ಯುತ್ ಬಾಕಿ ಇದೆ ಎಂದು ಮೀಟರ್ ಬೋರ್ಡ್ ಅನ್ನೇ ಕಿತ್ತುಕೊಂಡು ಹೋಗಿ, ಸಂಪರ್ಕ ಕಡಿತ ಮಾಡುತ್ತಿದ್ದಾರೆ.

ಕೊಡಗಿನಲ್ಲಿ ಸಾಕಷ್ಟು ಮಳೆಯಾಗುವುದರಿಂದ ಮಳೆಗಾಲದಲ್ಲಿ ಪಂಪ್ ಸೆಟ್ ಉಪಯೋಗಿಸುವುದೇ ಇಲ್ಲ. ಬೇಸಿಗೆಯಲ್ಲೇ ಕಾಫಿ ಹೂವು ಆಗುವುದರಿಂದ ಆ ಸಮಯಕ್ಕೆ ಅಗತ್ಯದಷ್ಟು ನೀರುಣಿಸಲೇ ಬೇಕು. ಇಲ್ಲದಿದ್ದರೆ ಕಾಫಿ ಹೂವು ಸಂಪೂರ್ಣ ಉದುರಿ ಇಡೀ ವರ್ಷದ ಬೆಳೆ ಹಾಳಾಗುತ್ತದೆ. ಆದ್ದರಿಂದ ಸರ್ಕಾರ ಕೊಡಗಿನ 10 ಹೆಚ್‌ಪಿ ವರೆಗಿನ ಪಂಪ್ ಸೆಟ್ ಬಳಸುವ ರೈತರಿಗೆ ಕೇವಲ ಎರಡು ತಿಂಗಳು ಮಾತ್ರವೇ ಉಚಿತ ವಿದ್ಯುತ್ ನೀಡಿದರೆ ಸಾಕು ಎಂದು ಆಗ್ರಹಿಸುತ್ತಿದ್ದಾರೆ.

kodagu water

ಒಟ್ಟಿನಲ್ಲಿ ಈಗಾಗಲೇ ಕೊಡಗಿನ ಕಾಫಿ ಬೆಳೆಗಾರರು ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಮಡಿಕೇರಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಇನ್ನಾದರೂ ಸರ್ಕಾರ, ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *