ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ – ಸರ್ವ ಪಕ್ಷ ಸಭೆ ಬಳಿಕ ಗುಡುಗಿದ ಸಿದ್ದು

Public TV
2 Min Read
CM BOMMAI MEETING 1

ಬೆಂಗಳೂರು: ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ. ಮೇಕೆದಾಟು, ಮಹದಾಯಿಗೆ ಪರಿಸರ ಇಲಾಖೆ ಅನುಮತಿ ಪಡೆಯಲು ಒತ್ತಾಯಿಸಿದ್ದೇವೆ ಎಂದು ಸರ್ವಪಕ್ಷ ಸಭೆಯ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

CM BOMMAI MEETING

ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು, ಕೃಷ್ಣ ಮೇಲ್ದಂಡೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ವೇಳೆ ಹಾಕಿರುವ ಕೇಸ್‍ಗಳ ವಾಪಸ್‍ಗೆ ಸಿಎಂ ಜೊತೆ ಕೇಳಿದ್ದೇವೆ. ಪರಿಶೀಲಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು. ಇದನ್ನೂ ಓದಿ: Hijab Row: ನಾವು ಯಾವ ದೇಶದಲ್ಲಿ ಇರುತ್ತೇವೆಯೋ ಆ ದೇಶದ ನಿಯಮಗಳನ್ನು ಪಾಲಿಸಬೇಕು: ಅಬ್ದುಲ್ ಖಾದರ್ ನಡುಕಟ್ಟಿನ್

ಈ ಮೊದಲು ಸಭೆಯಲ್ಲಿ ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಪ್ರಧಾನಿ ಮೋದಿ ಬಳಿಗೆ ನಿಯೋಗ ಕೊಂಡೊಯ್ಯಲು ಸರ್ವಪಕ್ಷ ಸಭೆ ಒಮ್ಮತವಾಗಿ ನಿರ್ಣಯಿಸಿದೆ. ಕಾವೇರಿ ನೀರು ಹಂಚಿಕೆಯಾಗಿರುವಾಗ ಮೇಕೆದಾಟು ಯೋಜನೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಹೇಳಿದ್ರು. ತಮಿಳುನಾಡು ವಿರೋಧಕ್ಕೆ ಕ್ಯಾರೆ ಮಾಡದಿರಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ಇದೇ ವೇಳೆ, ಪರಸ್ಪರ ಮಾತುಕತೆ ಮೂಲಕ ಮೇಕೆದಾಟು ವಿವಾದ ಬಗೆಹರಿಸಿಕೊಳ್ಳಿ, ಕೇಂದ್ರವೂ ಅಗತ್ಯ ಬಿದ್ರೆ ಮಧ್ಯಸ್ಥಿಕೆ ವಹಿಸಲಿದೆ ಅಂದಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆಗೆ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷ ನಾಯಕರು ಆಕ್ಷೇಪಿಸಿದರು. ನದಿ ಜೋಡಣೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ ಅಂತ ಕಾಂಗ್ರೆಸ್ ನಾಯಕರು ಕಳವಳ ವ್ಯಕ್ತಪಡಿಸಿದ್ರು. ರಾಜ್ಯಕ್ಕೆ ಸಿಗಬೇಕಿರುವ ನೀರಿನ ಪಾಲಿನಲ್ಲಿ ರಾಜಿ ಪ್ರಶ್ನೆಯೇ ಇಲ್ಲ ಅಂತ ಸಿಎಂ ತಿಳಿಸಿದರು.

CM BOMMAI MEETING 2

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಕಾರಜೋಳ ಮುಂದಿನ ವಾರ ದೆಹಲಿಗೆ ಹೋಗಿ, ಕೇಂದ್ರಕ್ಕೆ ಮಾಹಿತಿ ತಿಳಿಸುತ್ತಾರೆ. ಅಧಿವೇಶನ ಮುಗಿದ ಮೇಲೆ ನಾನೂ ದೆಹಲಿಗೆ ಹೋಗಿ ಮಾತನಾಡ್ತೇನೆ. ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಡಿಮೆ ಅಂತರದಲ್ಲಿ ಸೋಲು – ಬೂತ್‌ ಮಟ್ಟದಲ್ಲಿ ವಿಶ್ಲೇಷಣೆಗೆ ಮುಂದಾದ ಯುಪಿ ಬಿಜೆಪಿ

ಸಭೆಯಲ್ಲಿ ಡಿಕೆ ಶಿವಕುಮಾರ್, ಎಂಬಿ ಪಾಟೀಲ್, ಎಚ್‍ಕೆ ಪಾಟೀಲ್, ಬಿಕೆ ಹರಿಪ್ರಸಾದ್, ಜೆಡಿಎಸ್‍ನಿಂದ ಬಂಡೆಪ್ಪ ಖಾಶೆಂಪೂರ್ ಸೇರಿದಂತೆ ಸಚಿವರಾದ ಕಾರಜೋಳ, ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಸುಪ್ರೀಂಕೋರ್ಟ್‍ನಲ್ಲಿ ರಾಜ್ಯದ ಪರ ವಕಾಲತು ವಹಿಸಿರುವ ವಕೀಲರಾದ ಮೋಹನ್ ಕಾತರಕಿ, ರಾಕೇಶ್ ಸಿಂಗ್ ಭಾಗಿಯಾಗಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಗೈರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *