ಪುನೀತ್ ರಾಜ್ ಕುಮಾರ್ ಮತ್ತು ನವರಸ ನಾಯಕ ಜಗ್ಗೇಶ್ ಒಂದೇ ದಿನ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷವೂ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಪುನೀತ್ ಮತ್ತು ಜಗ್ಗೇಶ್. ಈ ವರ್ಷ ಪುನೀತ್ ನಿಧನದಿಂದಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ ಜಗ್ಗೇಶ್. ಹಾಗಾಗಿ ಇಂದು ಅವರು ಮಂತ್ರಾಲಯದ ರಾಯರ ಮಠದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ.
ಜಗ್ಗೇಶ್ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದೇ ಇದ್ದರೂ, ಅವರ ಮೂರು ಸಿನಿಮಾಗಳ ಪೋಸ್ಟರ್ ಗಳು ಇಂದು ಬಿಡುಗಡೆ ಆಗಿವೆ. ಮೂರು ವಿಭಿನ್ನ ರೀತಿಯಲ್ಲಿ ಡಿಸೈನ್ ಆಗಿದ್ದು ವಿಶೇಷ. ಸದ್ಯ ಜಗ್ಗೇಶ್ ‘ತೋತಾಪುರಿ’, ‘ರಂಗನಾಯಕ’ ಮತ್ತು ‘ರಾಘವೇಂದ್ರ ಸ್ಟೋರ್ಸ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೂ ಸಿನಿಮಾಗಳ ಪೋಸ್ಟರ್ ಇಂದು ರಿಲೀಸ್ ಆಗಿವೆ.
ತೋತಾಪುರಿ
ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಗಿಸುತ್ತಲೇ ಒಂದೊಳ್ಳೆ ಭಾವನಾತ್ಮಕ ಕಥೆಯನ್ನು ಈ ಸಿನಿಮಾ ಹೇಳಲಿದೆಯಂತೆ. ಹಿಂದೂ ಮುಸ್ಲಿಂ ಸಾಮರಸ್ಯವನ್ನು ಸಾರುವಂತಹ ಚಿತ್ರ ಕೂಡ ಇದಾಗಿದೆ. ಜಗ್ಗೇಶ್ ಹೀರೋ ಆಗಿ ನಟಿಸಿದ್ದರೆ, ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದಿತಿ ಪ್ರಭುದೇವ್ ನಾಯಕಿ. ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರುತ್ತಿರುವುದು ವಿಶೇಷ. ಕೆ.ಎ. ಸುರೇಶ್ ಇದರ ನಿರ್ಮಾಪಕರು. ಇದನ್ನೂ ಓದಿ : ವಿಭಿನ್ನ, ವಿಶಿಷ್ಟ, ಭಾವನಾತ್ಮಕ ಡಿಪಿಗಳಲ್ಲಿ ಪುನೀತ್ ರಾಜ್ ಕುಮಾರ್
ರಂಗನಾಯಕ
ಮಠದ ಗುರು ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ ನ ಮೂರನೇ ಸಿನಿಮಾ ‘ರಂಗನಾಯಕ’. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ನಟನೊಬ್ಬನ ಬದುಕಿನ ಕುರಿತಾದ ಸಿನಿಮಾ ಇದಾಗಿದ್ದು, ಜಗ್ಗೇಶ್ ರಂಗನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಮತ್ತೆ ಸಿನಿಮಾ ಮಾಡುವುದಿಲ್ಲ ಎಂಬ ಗಾಂಧಿನಗರದ ಮಾತನ್ನು ಸುಳ್ಳು ಮಾಡಿದ ಚಿತ್ರವಿದು. ವಿಖ್ಯಾತ ಈ ಚಿತ್ರದ ನಿರ್ಮಾಪಕರು. ಇದನ್ನೂ ಓದಿ : ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ
ರಾಘವೇಂದ್ರ ಸ್ಟೋರ್ಸ್
‘ರಾಜಕುಮಾರ’ ಸಿನಿಮಾ ಖ್ಯಾತಿಯ ಸಂತೋಷ್ ಆನಂದ್ ರಾಮ್, ಇದೇ ಮೊದಲ ಬಾರಿಗೆ ಜಗ್ಗೇಶ್ ಗಾಗಿ ಮಾಡಿದ ಚಿತ್ರ ‘ರಾಘವೇಂದ್ರ ಸ್ಟೋರ್ಸ್’. ಅನ್ನದ ಮಹತ್ವವನ್ನು ಇಟ್ಟುಕೊಂಡು ಕಥೆ ಬರೆದಿದ್ದಾರಂತೆ ನಿರ್ದಶಕರು. ಜಗ್ಗೇಶ್ ನಾಯಕನಾದರೆ, ಶ್ವೇತಾ ಶ್ರೀವಾತ್ಸವ್ ನಾಯಕಿ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದ, ಡಬ್ಬಿಂಗ್ ಕೆಲಸವನ್ನೂ ಮುಗಿಸಿದೆ ಚಿತ್ರತಂಡ. ಹೊಂಬಾಳೆ ಫಿಲ್ಮ್ಸ್ ಇದರ ನಿರ್ಮಾಪಕರು.