ಗುರುವಾರ (ಮಾ.17) ಬೆಳಗ್ಗಿನಿಂದಲೇ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧರಾಗಿದ್ದ ಬೆಂಗಳೂರಿನ ಪುನೀತ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಪೊಲೀಸ್ ಇಲಾಖೆಯು ಕೆಲವು ಷರತ್ತುಗಳನ್ನು ಹಾಕಿದ್ದು, ಅದರಾಚೆ ಅಭಿಮಾನಿಗಳು ಏನು ಮಾಡುವಂತಿಲ್ಲವೆಂದು ಹೇಳಿದೆ.
ನಾಳೆ ಬೆಂಗಳೂರಿನ ಚಾಮರಾಜಪೇಟೆಯಿಂದ ಬೃಹತ್ ಮೆರವಣಿಗೆ ಹೊರಟು, ನಾನಾ ಬೀದಿಗಳ ಮೂಲಕ ವೀರೇಶ್ ಚಿತ್ರಮಂದಿರ ಸೇರುವ ಸಿದ್ಧತೆಯಲ್ಲಿದ್ದು ಅಭಿಮಾನಿಗಳು. ಬೈಕ್ ರಾಲಿ ಸೇರಿದಂತೆ ನಕ್ಷತ್ರ ಮೆರವಣಿಗೆಗಳನ್ನೂ ಆಯೋಜನೆ ಮಾಡಲಾಗಿತ್ತು. ಮೆರವಣಿಗೆಯುದ್ದಕ್ಕೂ ಪುನೀತ್ ರಾಜ್ ಕುಮಾರ್ ಅವರ ಹಾಡುಗಳನ್ನು ಬಳಸಿಕೊಂಡು, ನೃತ್ಯ ಮತ್ತಿತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಮೆರವಣಿಗಾಗಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಅನುಮತಿ ಪಡೆಯಲು ಅಭಿಮಾನಿಗಳು ಪತ್ರವೊಂದನ್ನು ಬರೆದಿದ್ದರು. ಈಗ ಚಾಮರಾಜಪೇಟೆ ಪೊಲೀಸರು ಅನುಮತಿ ಕೊಡಲು ನಿರಾಕರಿಸಿದ್ದಾರೆ. ನಗರದ ಸರಹದ್ದಿಯಲ್ಲಿ ಬೃಹತ್ ಮೆರವಣಿಗೆ ಮತ್ತು ಮುಷ್ಕರ ನಡೆಸದಂತೆ ಉಚ್ಛ ನ್ಯಾಯಾಲಯವು ಆದೇಶಿಸಿರುವ ಹಿನ್ನೆಲೆಯಲ್ಲಿ ಅನುಮತಿಯನ್ನು ಪೊಲೀಸ್ ನವರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ನಾಳೆ ಮೆರವಣಿಗೆ ಮಾಡುವಂತಿಲ್ಲವಾಗಿದೆ. ಇದನ್ನೂ ಓದಿ : ದುನಿಯಾ ವಿಜಯ್ ನಟನೆಯ ತೆಲುಗು ಸಿನಿಮಾದ ಫಸ್ಟ್ ಲುಕ್ ರಿಲೀಸ್ : ಯಾರದು ಪ್ರತಾಪ್ ರೆಡ್ಡಿ?
ಮತ್ತೊಂದು ಕಡೆ ಹೆಲಿಕಾಪ್ಟರ್ ಮೂಲಕ ಮೊದಲು ಪುನೀತ್ ಸಮಾಧಿಗೆ ನಂತರ ವೀರಭದ್ರೇಶ್ವರ ಥಿಯೇಟರ್, ಪ್ರಸನ್ನ ಮತ್ತು ವೀರೇಶ್ ಚಿತ್ರಮಂದಿರಗಳ ಮೇಲೆ ಪುಷ್ಪಮಳೆ ಸುರಿಸಲು ಕೂಡ ಅಭಿಮಾನಿಗಳು ಸಜ್ಜಾಗಿದ್ದರು. ಅದಕ್ಕೂ ಈಗ ಬ್ರೇಕ್ ಬಿದ್ದಿದೆ. ಭದ್ರತಾ ದೃಷ್ಟಿಯಿಂದ ಹೆಲಿಕ್ಯಾಪ್ಟರ್ ಪುಷ್ಪಮಳೆಗೆ ಅನುಮತಿ ನಿರಾಕರಿಸಲಾಗಿದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
ಹೆಲಿಕಾಪ್ಟರ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ನಾಳೆ ಪುನೀತ್ ಅವರ ಹುಟ್ಟು ಹಬ್ಬ ಮತ್ತು ಸಿನಿಮಾ ಬಿಡುಗಡೆ ಇರುವ ಕಾರಣಕ್ಕಾಗಿ ಸಹಜವಾಗಿ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹೀಗಾಗಿ ಭದ್ರತೆ ನೀಡುವುದು ಕಷ್ಟವಾಗುತ್ತದೆ. ಹೆಚ್ಚಿನ ಜನ ಸೇರುವುದರಿಂದ ಕಾಲ್ತುಳಿತ ಕೂಡ ಸಂಭವಿಸಬಹುದು. ಹೆಲಿಕಾಪ್ಟರ್ ಗೂ ಭದ್ರತೆ ನೀಡುವುದು ಕಷ್ಟ. ಹೆಲಿಕಾಪ್ಟರ್ ಅತೀ ಕೆಳಗೆ ಹಾರುವುದರಿಂದ ಮತ್ತು ಇಳಿಯುವುದರಿಂದ ಟವರ್, ಬಿಲ್ಡಿಂಗ್ ಗಳು ಅಡ್ಡಿಯಾದರೆ ಅನಾಹುತ ಸಂಭವಿಸಬಹುದು. ಈ ಕಾರಣದಿಂದಾಗಿ ಅನುಮತಿಯನ್ನು ಪೊಲೀಸ್ ಇಲಾಖೆ ನಿರಾಕರಿಸಿದೆ.