ಬೆಂಗಳೂರು: ಹಿಜಬ್ ಇಸ್ಲಾಂ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ, ಸಂಬಂಧಪಟ್ಟವರು ಸಲ್ಲಿಸಬಹುದು. ಸಿಡಿಸಿ ತೀರ್ಮಾನದಂತೆ ಸಮವಸ್ತ್ರ ನಿರ್ಧಾರ ಆಗುತ್ತೆ, ಸಿಡಿಸಿ ತೀರ್ಮಾನ ಇಲ್ಲದ ಕಡೆ ಸಮವಸ್ತ್ರ ಇಲ್ಲದಿರಬಹುದು. ಹಿಜಬ್, ಇಸ್ಲಾಂ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್
ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.
ರಾಜ್ಯದಲ್ಲಿ ಹಿಜಬ್ ವಿವಾದದ ಕಿಡಿ ಹೊತ್ತಿದ್ದೇ ಉಡುಪಿಯ ಸರ್ಕಾರಿ ಪಿಯು ಕಾಲೇಜಿನಿಂದ. 2021 ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಿಜಬ್ ಬೇಡಿಕೆ ಶುರುವಾಗಿತ್ತು. ಮನವಿ ಪತ್ರಗಳಿಗೆ ಪುರಸ್ಕಾರ ನೀಡದ ಪ್ರಾಂಶುಪಾಲರು, ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕಿದ್ದರು. ಡಿಸೆಂಬರ್ 31ಕ್ಕೆ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾಗಿ ಒಂದು ತಿಂಗಳ ನಂತರ ಅಂದರೆ ಜನವರಿ 31ರಂದು ವಿದ್ಯಾರ್ಥಿನಿ ಅಲ್ಮಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಇದಾದ ಬಳಿಕ ರಾಜ್ಯದಲ್ಲಿ ಧರ್ಮ ಸಂಘರ್ಷವೇ ಶುರುವಾಗಿತ್ತು.