ರಾಷ್ಟ್ರಪತಿ ಚುನಾವಣೆ – ಬಿಜೆಪಿ ಅಭ್ಯರ್ಥಿಗೆ ಸುಲಭವಾಗಿ ಸಿಗಲಿದೆ ಜಯ

Public TV
2 Min Read
rashtrapati bhavan delhi entry fee timings holidays reviews header

ನವದೆಹಲಿ: ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿದ್ದರಿಂದ ಈ ಬಾರಿಯ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅವಧಿ ಜು.24ಕ್ಕೆ ಅಂತ್ಯಗೊಳ್ಳಲಿದೆ. 75 ವರ್ಷ ಮೇಲ್ಪಟ್ಟವರಿಗೆ ಪಕ್ಷದಿಂದ ನಿವೃತ್ತಿ ನೀಡುವ ಹಿನ್ನೆಲೆಯಲ್ಲಿ 76 ವರ್ಷದ ಕೋವಿಂದ್‌ ಅವರನ್ನು ಎರಡನೇ ಬಾರಿ ಆಯ್ಕೆ ಮಾಡುವುದು ಅನುಮಾನ. ರಾಷ್ಟ್ರಪತಿ ಚುನಾವಣೆಯನ್ನು ಗೆಲ್ಲಬೇಕಾದರೆ ಉತ್ತರ ಪ್ರದೇಶದ ಗೆಲುವು ಬಿಜೆಪಿಗೆ ಅನಿವಾರ್ಯವಾಗಿತ್ತು.

modi yogi1

ಮತ ಲೆಕ್ಕಾಚಾರ ಹೇಗೆ?
ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಸದಸ್ಯರು, ರಾಜ್ಯಸಭೆ ಸದಸ್ಯರು, ರಾಜ್ಯ ವಿಧಾನಸಭೆಗಳ ಸದಸ್ಯರು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆ ಸದಸ್ಯರು ಮತ ಹಾಕುತ್ತಾರೆ. ವಿಧಾನಪರಿಷತ್‌ ಸದಸ್ಯರಿಗೆ ಮತ ಇಲ್ಲ.

543 ಲೋಕಸಭಾ ಸದಸ್ಯರು, 233 ರಾಜ್ಯಸಭಾ ಸದಸ್ಯರು ಮತ್ತು ದೇಶದ ವಿಧಾನಸಭೆಯಲ್ಲಿರುವ 4,120 ಶಾಸಕರು ಮತ ಹಾಕಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 10,98,903 ಮತಗಳು ಚಲಾವಣೆಯಾಗುತ್ತವೆ. ಶೇ.50ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಜಯಗಳಿಸುತ್ತಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್‌ ಆಯ್ತು ಬುಲ್ಡೋಜರ್‌, ಬುಲ್ಡೋಜರ್‌ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ

ಎಲ್ಲ ಸಂಸದರ ವೋಟಿನ ಮೌಲ್ಯ 708. ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ಶಾಸಕನ ಮತವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಉತ್ತರ ಪ್ರದೇಶದ ಒಬ್ಬ ಶಾಸಕನ ಮತಕ್ಕೆ ದೇಶದಲ್ಲೇ ಅತಿಹೆಚ್ಚು ಮೌಲ್ಯ 208 ಇದೆ. ದೇಶದಲ್ಲೇ ಕಡಿಮೆ ಇರುವ ಸಿಕ್ಕಿಂ ರಾಜ್ಯದ ಒಬ್ಬ ಶಾಸಕನ ಮತದ ಮೌಲ್ಯ 7 ಇದೆ.

GOA ELECTION 1

ಉತ್ತರ ಪ್ರದೇಶದ 403 ಶಾಸಕರ ವೋಟಿನ ಮೌಲ್ಯ ಒಟ್ಟು 83,824. 80 ಸಂಸದರು ಮತ ಸೇರಿದರೆ ಮೌಲ್ಯ 56,640 ಆಗುತ್ತದೆ. ಉತ್ತರ ಪ್ರದೇಶ ಒಂದೇ ರಾಜ್ಯದಿಂದ 1.4 ಲಕ್ಷ ಮೌಲ್ಯದ ಮತಗಳು ಚಲಾವಣೆ ಆಗುತ್ತದೆ. ಉತ್ತರಾಖಂಡ 4,480, ಗೋವಾ 800, ಮಣಿಪುರದಲ್ಲಿ 1,080 ಮತಗಳು ಚಲಾವಣೆ ಆಗುತ್ತದೆ.

ಪಂಚರಾಜ್ಯಗಳ ಚುನಾವಣೆಗೂ ಮೊದಲು ಬಿಜೆಪಿ ಬಳಿ ರಾಷ್ಟ್ರಪತಿಯನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದಷ್ಟು ಮತಗಳಿದ್ದವು. ಒಂದು ವೇಳೆ ಉತ್ತರ ಪ್ರದೇಶದಲ್ಲಿ ಸೋತಿದ್ದರೆ ಬಿಜೆಡಿ, ಟಿಆರ್‌ಎಸ್‌, ವೈಎಸ್‌ಆರ್‌ ಪಕ್ಷಗಳ ಬೆಂಬಲವನ್ನು ಬಿಜೆಪಿ ಕೇಳಬೇಕಿತ್ತು.

ram nath kovind republic day

ಯಾಕೆ ಮಹತ್ವ?
ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಸೋತರೆ ಸರ್ಕಾರಕ್ಕೆ ಹಿನ್ನಡೆ ಎಂದೇ ಭಾವಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಸೂದೆಗಳಿಗೆ ಸಹಿ ಹಾಕದೇ ಇದ್ದರೆ ಯೋಜನೆ/ ನಿರ್ಧಾರಗಳು ತಡವಾಗಿ ಜಾರಿಯಾಗಬಹುದು ಅಥವಾ ಜಾರಿ ಆಗದೇ ಇರಬಹುದು. ಹಲವು ಬಾರಿ ಸರ್ಕಾರದ ನಿರ್ಧಾರವನ್ನು ರಾಷ್ಟ್ರಪತಿಗಳು ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಸಂಸತ್ತಿನಲ್ಲೂ ಮಸೂದೆ ಪಾಸ್‌ ಆದರೂ ರಾಷ್ಟ್ರಪತಿಗಳು ಅಂಕಿತ ಹಾಕದೇ ಇದ್ದರೆ ಸರ್ಕಾರಕ್ಕೆ ಆದ ದೊಡ್ಡ ಮುಜುಗರ ಎಂದೇ ಭಾವಿಸಲಾಗುತ್ತದೆ.

pranab sonia gandhi

2014ರಲ್ಲಿ ಮೋದಿ ಸರ್ಕಾರ ಅಧಿಕಾರ ಬಂದಾಗ ಪ್ರಣಬ್‌ ಮುಖರ್ಜಿ ರಾಷ್ಟ್ರಪತಿ ಆಗಿದ್ದರು. ಈ ಸಂದರ್ಭದಲ್ಲಿ ಹಣಕಾಸಿಗೆ ಸಂಬಂಧಿಸಿದ ವಿಚಾರ ಬಂದಾಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರನ್ನು ಹಲವು ಬಾರಿ ಪ್ರಣಬ್‌ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ಕರೆಯಿಸಿ ಸ್ಪಷ್ಟನೆ ಕೇಳಿದ್ದರು.

2017ರ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಕೋವಿಂದ್‌ ಶೇ.65.65 ಮತಗಳನ್ನು ಪಡೆದಿದ್ದರೆ ಯುಪಿಎ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್‌ ಶೇ.34.35 ಮತಗಳನ್ನು ಪಡೆದಿದ್ದರು. ಕೋವಿಂದ್‌ 2,930 ಮತ(7,02,044 ಮೌಲ್ಯ) ಪಡೆದಿದ್ದರೆ ಮೀರಾ ಕುಮಾರ್‌ 1,844 ಮತ(3,67,314 ಮೌಲ್ಯ) ಪಡೆದಿದ್ದರು. 77 ಮತಗಳು ತಿರಸ್ಕೃತವಾಗಿದ್ದವು.

Share This Article
Leave a Comment

Leave a Reply

Your email address will not be published. Required fields are marked *