ನ್ಯಾಟೋ ಸದಸ್ಯತ್ವಕ್ಕೆ ಪಟ್ಟು ಹಿಡಿಯಲ್ಲ ಎಂದ ಉಕ್ರೇನ್‌: ರಷ್ಯಾದ 2 ಷರತ್ತಿಗೆ ಒಪ್ಪಿಗೆ

Public TV
3 Min Read
PUTIN AND ZALANCKY

ಕಿವ್‌: ಮಹತ್ವದ ಬೆಳವಣಿಗೆಯಲ್ಲಿ ನ್ಯಾಟೋ(NATO) ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಹೇಳಿದ್ದಾರೆ.

ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ಎರಡು ರಷ್ಯಾ-ಪರ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಮಂಗಳವಾರ ರಾತ್ರಿ ಪ್ರಕಟಿಸಿದ್ದಾರೆ.

ರಷ್ಯಾ ವಿಧಿಸಿದ್ದ 4 ಪ್ರಮುಖ ಷರತ್ತುಗಳಲ್ಲಿ ಎರಡನ್ನು ಉಕ್ರೇನ್‌ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಯುದ್ಧ ಅಂತ್ಯವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

Russia Ukraine War 3 1

ನಮ್ಮನ್ನು ನ್ಯಾಟೋ ಒಪ್ಪಿಕೊಳ್ಳಲು ತಯಾರಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಿ ಅಪಾಯ ತಂದುಕೊಳ್ಳಲು ನ್ಯಾಟೋಗೆ ಇಷ್ಟವಿಲ್ಲ. ರಷ್ಯಾ ವಿರುದ್ಧ ಯುದ್ಧ ಮಾಡಲು ನ್ಯಾಟೋ ಹೆದರುತ್ತದೆ. ಹೀಗಾಗಿ ನ್ಯಾಟೋ ಕುರಿತ ನಮ್ಮ ನಿಲುವಿನಿಂದ ನಾವು ಹಿಂದಕ್ಕೆ ಸರಿದಿದ್ದೇವೆ ಎಂದು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಲೆನ್‌ಸ್ಕಿ ತಿಳಿಸಿದ್ದಾರೆ.‌ ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಏರಿಕೆ ಬೆನ್ನಲ್ಲೇ ಭಾರತಕ್ಕೆ ರಷ್ಯಾದಿಂದ ಭಾರೀ ಆಫರ್

ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದೂ ಜೆಲೆನ್‌ಸ್ಕಿ ತಿಳಿಸಿದ್ದು ಯುದ್ಧ ಅಂತ್ಯವಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

ಯುದ್ಧ ನಿಲ್ಲಿಸಬೇಕಾದರೆ ರಷ್ಯಾ 4 ಷರತ್ತನ್ನು ಉಕ್ರೇನ್‌ಗೆ ವಿಧಿಸಿತ್ತು. ಈ 4 ಷರತ್ತನ್ನು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲಿಸುವುದೇ ಇಲ್ಲ ಎಂದು ರಷ್ಯಾ ಸಂಧಾನ ಸಭೆಯಲ್ಲಿ ಖಡಕ್‌ ಆಗಿ ಹೇಳಿತ್ತು.

z ukraine

ರಷ್ಯಾದ ಷರತ್ತು ಏನಿತ್ತು?
1. ನ್ಯಾಟೋ ಸೇರಬಾರದು:
ಅಮೆರಿಕ ನೇತೃತ್ವದ 30 ಪಾಶ್ಚಾತ್ಯ ದೇಶಗಳ ‘ನ್ಯಾಟೋ’ ಸಂಘಟನೆ ಸೇರಿದಂತೆ ಯಾವುದೇ ಗುಂಪುಗಳನ್ನು ಉಕ್ರೇನ್‌ ಸೇರಬಾರದು. ಉಕ್ರೇನ್‌ ತಟಸ್ಥವಾಗಿ ಉಳಿಯುವ ನಿರ್ಧಾರ ತೆಗೆದುಕೊಳ್ಳಬೇಕು. ಮುಂದೆ ಯಾವುದೇ ಕಾರಣಕ್ಕೂ ಹೊಸ ಸಂಘಟನೆಯನ್ನು ನಾನು ಸೇರುವುದಿಲ್ಲ ಎಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

2. ಕೂಡಲೇ ಸೇನಾ ಕಾರ್ಯಾಚರಣೆ ನಿಲ್ಲಿಸಬೇಕು:
ನಾವು ಉಕ್ರೇನ್‌ ಅನ್ನು ಸಂಪೂರ್ಣ ನಿಶ್ಶಸ್ತ್ರೀಕರಣ ಮಾಡುತ್ತಿದ್ದೇವೆ. ಒಂದು ವೇಳೆ ಉಕ್ರೇನ್‌ ತನ್ನ ಸೇನಾ ಕಾರ್ಯಚರಣೆ ಸ್ಥಗಿತಗೊಳಿಸಿದರೆ ನಾವು ಒಂದೇ ಒಂದು ಗುಂಡನ್ನೂ ಹಾರಿಸುವುದಿಲ್ಲ.

3. ರಾಜ್ಯಗಳಿಗೆ ಮಾನ್ಯತೆ ಬೇಕು:
ಬಂಡುಕೋರರ ವಶದಲ್ಲಿರುವ ಪ್ರಾಂತ್ಯಗಳಾದ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಸ್ವತಂತ್ರ್ಯ ರಾಜ್ಯಗಳೆಂದು ಘೋಷಿಸಿ ಅವುಗಳಿಗೆ ಮಾನ್ಯತೆ ನೀಡಬೇಕು.

RUSSIA UKRANE WAR 4

4.ಕ್ರೆಮಿಯಾಕ್ಕೆ ಮಾನ್ಯತೆ:
ಉಕ್ರೇನ್‌ ಮೇಲೆ ದಾಳಿ ನಡೆಸಿ 2014ರಲ್ಲಿ ವಶಪಡಿಸಿಕೊಂಡ ಕ್ರೆಮಿಯಾವನ್ನು ರಷ್ಯಾದ ಭಾಗವೆಂದು ಒಪ್ಪಬೇಕು. ಇವುಗಳಿಗೆ ಒಪ್ಪಿದರೆ ತಕ್ಷಣವೇ ನಾವು ಯುದ್ಧ ನಿಲ್ಲಿಸಲಿದ್ದೇವೆ. ಇದನ್ನೂ ಓದಿ: ರಷ್ಯಾದ ತೈಲ, ಅನಿಲ ಆಮದಿಗೆ ಅಮೆರಿಕ ನಿರ್ಬಂಧ

ರಷ್ಯಾ ಆತಂಕ ಏನು?
ನ್ಯಾಟೋ ಸಂಕ್ಷಿಪ್ತ ರೂಪ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ). ಪ್ರಸ್ತುತ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ ಮೂಲ ಕಾರಣವೇ ಈ ನ್ಯಾಟೋ.

ಉಕ್ರೇನ್ ನ್ಯಾಟೋದ ಭಾಗವಾಗಲು ಬಯಸುತ್ತಿತ್ತು. ಆದರೆ ರಷ್ಯಾ ನ್ಯಾಟೋವನ್ನು ಬಲವಾಗಿ ವಿರೋಧಿಸುತ್ತಿದೆ. ತನ್ನ ವಿರುದ್ಧ ಹಣಿಯಲಾದ ದೇಶಗಳ ಒಕ್ಕೂಟ ಎಂದೇ ರಷ್ಯಾ ನ್ಯಾಟೋವನ್ನು ಕರೆಯುತ್ತಿದೆ. ಉಕ್ರೇನ್ ನ್ಯಾಟೋಗೆ ಸೇರಿದರೆ ಉಕ್ರೇನ್‌ ಮೂಲಕ ನ್ಯಾಟೋದ ಸೈನ್ಯ ತನ್ನ ಗಡಿಗೆ ಬರುತ್ತದೆ ಎಂಬ ಆತಂಕವನ್ನು ರಷ್ಯಾ ವ್ಯಕ್ತಪಡಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಸುತ್ತಿನ ಮಾತುಕತೆ ನಡೆದರೂ ಯಾವುದೇ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿತ್ತು.

ukraine 3 1

ನ್ಯಾಟೋ ರಚನೆಯಾದ ಆರಂಭದಲ್ಲಿ 12 ಸದಸ್ಯ ರಾಷ್ಟ್ರಗಳನ್ನು ಹೊಂದಿತ್ತು. ಇದು ಅಮೆರಿಕ, ಬ್ರಿಟನ್, ಫ್ರಾನ್ಸ್, ಕೆನಡಾ, ಇಟಲಿ, ನೆದರ್ಲ್ಯಾಂಡ್ಸ್, ಐಸ್‌ಲ್ಯಾಂಡ್‌, ಬೆಲ್ಜಿಯಂ, ಲಕ್ಸೆಂಬರ್ಗ್, ನಾರ್ವೆ, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ಅನ್ನು ಒಳಗೊಂಡಿತ್ತು. ಇಂದು, ನ್ಯಾಟೋ ಅಡಿಯಲ್ಲಿ 30 ಸದಸ್ಯ ರಾಷ್ಟ್ರಗಳಿವೆ

ನ್ಯಾಟೋ ಸಾಮಾನ್ಯ ಭದ್ರತಾ ನೀತಿಯ ಮೇಲೆ ಕಾರ್ಯನಿರ್ವಹಿಸುವ ಮಿಲಿಟರಿ ಮೈತ್ರಿಯಾಗಿದೆ. ನ್ಯಾಟೋ ಸದಸ್ಯ ರಾಷ್ಟ್ರವನ್ನು ಆಕ್ರಮಿಸಿದರೆ, ಇದನ್ನು ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ನ್ಯಾಟೋ ಸದಸ್ಯ ರಾಷ್ಟ್ರಗಳು ಆಕ್ರಮಣದ ವಿರುದ್ಧ ಒಗ್ಗಟ್ಟಾಗಿ ಕೆಲಸ ಮಾಡುತ್ತದೆ.

Share This Article
Leave a Comment

Leave a Reply

Your email address will not be published. Required fields are marked *