ಪಂಜದಲ್ಲಿ ಎಗ್ಗಿಲ್ಲದೇ ನಡೀತಿದೆ ಅಕ್ರಮ ಮರಳುಗಾರಿಕೆ – ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ

Public TV
3 Min Read
MNG SAND

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ನಡಿಯುತ್ತಿದ್ದು, ದಂಧೆ ತಡೆಯಬೇಕಾದ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯೇ ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

MNG SAND 2

ಮಂಗಳೂರು ನಗರ ಪ್ರದೇಶ ಹೊರತುಪಡಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ದಂಧೆ ಯಥಾಪ್ರಕಾರ ಮತ್ತೆ ಚಿಗುರಿಕೊಂಡಿದ್ದು ಇದರ ಅಟ್ಟಹಾಸಕ್ಕೆ ಸ್ಥಳೀಯರು ಕಂಗಾಲಾಗಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಎರಡು ದಿನಗಳ ಹಿಂದಷ್ಟೇ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಮೂರು ದೋಣಿ ಹಾಗೂ ಅಪಾರ ಪ್ರಮಾಣದ ಸೊತ್ತು, ಮರಳನ್ನು ಜಪ್ತಿ ಮಾಡಿದ್ದರು. ಆದರೆ ಜಿಲ್ಲೆಯ ಗಡಿಭಾಗದ ನಿಂತಿಕಲ್, ಪಂಜ ಸುತ್ತಮುತ್ತ ಹತ್ತಾರು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ “ಮಾಮೂಲಿ” ಎಂಬಂತೆ ನಡೀತಿದ್ದು ಅಧಿಕಾರಿಗಳೇ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದನ್ನೂ ಓದಿ: ಹಿಜಬ್‍ಗೆ ಅವಕಾಶ ನೀಡಿ – ಪ್ರತಿಭಟಿಸುತ್ತಿದ್ದ 58 ವಿದ್ಯಾರ್ಥಿಗಳು ಸಸ್ಪೆಂಡ್!

ಮಣಿನಾಲ್ಕೂರಿನ ಅಕ್ರಮ ಮರಳು ಅಡ್ಡೆಗೆ ಭೂ ವಿಜ್ಞಾನಿ ಡಾ. ಮಹದೇಶ್ವರ ಅವರು ದಾಳಿ ನಡೆಸಿ 3 ಬೋಟ್, 3 ಮೋಟಾರ್ ಹಾಗೂ ಬೋಟ್‍ನಲ್ಲಿ ಅಳವಡಿಸಿದ್ದ 5 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದರು. ಒಂದು ದೋಣಿಯಿಂದ 1 ಟನ್ ಮರಳು ಹಾಗೂ 2 ದೋಣಿಗಳಿಂದ ತಲಾ ಅರ್ಧ ಅರ್ಧ ಟನ್ ಮರಳು ವಶಪಡಿಸಿಕೊಳ್ಳಲಾಗಿತ್ತು. ಗಣಿ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ಕ್ರಮ ಜರುಗಿಸುತ್ತಿದ್ದರೆ ನಿಂತಿಕಲ್, ಪಂಜ ಸಮೀಪದ ಕೇನ್ಯ ತ್ರಿಶೂಲಿನಿ ದೇವಸ್ಥಾನ ರಸ್ತೆಯಾಗಿ ವಿಷ್ಣುಮೂರ್ತಿ ದೈವಸ್ಥಾನಕ್ಕೆ ಸಾಗುವಾಗ ಕೆಲವೇ ಕಿ.ಮೀ. ದೂರದಲ್ಲಿ ನದಿಯ ಕವಲು ಹೊಳೆಯಿಂದ ಕಳೆದ ಕೆಲವು ಸಮಯಗಳಿಂದ ಅಕ್ರಮ ಮರಳುಗಾರಿಕೆ ಯಥಾಪ್ರಕಾರ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಇದ್ದರೂ ಗಣಿ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಕಣ್ಮುಚ್ಚಿ ಕೂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

MNG SAND 3

ಜಿಲ್ಲೆಯ ಗಡಿಭಾಗದ ಆಯಕಟ್ಟಿನ ಜಾಗಗಳಲ್ಲಿ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ನಡೆಯುತ್ತಿದ್ದು ಸಕಲೇಶಪುರ ಮಾರ್ಗವಾಗಿ ಹಾಸನ, ಬೆಂಗಳೂರಿಗೂ ಮರಳು ಸಾಗಾಟವಾಗುತ್ತಿದೆ. ದಿನವೊಂದಕ್ಕೆ ನೂರಾರು ಲೋಡ್ ಗಳಷ್ಟು ಮರಳು ಸಾಗಿಸುತ್ತಿದ್ದು ಸ್ಥಳೀಯ ಜನಪ್ರತಿನಿಧಿಗಳ ಆಪ್ತರೊಬ್ಬರು ದಂಧೆಯಲ್ಲಿ ಶಾಮೀಲಾಗಿರುವ ಕಾರಣ ಅಧಿಕಾರಿಗಳು ಚಕಾರವೆತ್ತದೆ ಮೌನಂ ಸಮ್ಮತಿ ಲಕ್ಷಣಂ ಎಂದು ಸುಮ್ಮನಿದ್ದಾರೆ. ಇಲ್ಲೇ ಅಕ್ಕಪಕ್ಕ ಹತ್ತಾರು ಕಡೆಗಳಲ್ಲಿ ದಂಧೆ ನಡೀತಿದ್ದರೂ ಸ್ಥಳೀಯ ಸುಬ್ರಮಣ್ಯ ಪೊಲೀಸರು ಮಾತ್ರ ಏನೂ ನಡೆದೇ ಇಲ್ಲವೆಂಬಂತಿದ್ದಾರೆ. ಇದನ್ನೂ ಓದಿ: ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ – 38 ಮಂದಿಗೆ ಮರಣ ದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ

ಇಲ್ಲಿ ತೆಪ್ಪ, ದೋಣಿ ಬಳಸಿ ಮರಳು ಸಂಗ್ರಹಿಸುತ್ತಿದ್ದು ಟಿಪ್ಪರ್ ಮೂಲಕ ಸುಬ್ರಮಣ್ಯ, ಗುಂಡ್ಯ, ಸಕಲೇಶಪುರ ಕಡೆಗೆ ದಿನವೊಂದಕ್ಕೆ 40-50 ಲೋಡ್‍ಗಳಷ್ಟು ಮರಳು ಸಾಗಾಟ ಮಾಡಲಾಗುತ್ತಿದೆ. ದಂಧೆಕೋರರು ಸರ್ಕಾರಕ್ಕೆ ರಾಜಧನ ವಂಚಿಸಿ ವಿವಿಧ ಇಲಾಖೆಗಳಿಗೆ ಮಾಮೂಲಿ ಕೊಟ್ಟು ದಂಧೆ ನಡೆಸುತ್ತಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ನಿದ್ದೆಯಿಂದ ಎದ್ದೇಳಬೇಕಿದೆ.

MNG SAND 1

ಸುಳ್ಯ, ಕಡಬದಲ್ಲಿ ಇನ್ನೂ ಬಿದ್ದಿಲ್ಲ ಬ್ರೇಕ್!
ಮರಳು ದಿಬ್ಬ ತೆರವು ಮಾಡಲು ಲೀಸ್‍ಗೆ ಪಡೆದಿರುವ ಗುತ್ತಿಗೆದಾರರು ತಮ್ಮ ವ್ಯಾಪ್ತಿ ಬಿಟ್ಟು ಎಲ್ಲೆಂದರಲ್ಲಿ ಹಿಟಾಚಿ, ಡ್ರೆಜ್ಜಿಂಗ್ ಮೆಷಿನ್ ಬಳಸಿ ಮರಳುಗಾರಿಕೆ ನಡೆಸುತ್ತಿದ್ದು ಕಡಬ, ಸುಬ್ರಮಣ್ಯ, ಬೆಳ್ತಂಗಡಿ, ಸುಳ್ಯ, ಸಂಪಾಜೆ ಭಾಗದಲ್ಲಿ ನದಿಯ ಒಡಲನ್ನೇ ಬರಿದು ಮಾಡುತ್ತಿದ್ದಾರೆ. ಭಾರೀ ಗಾತ್ರದ ಲಾರಿಗಳ ಓಡಾಟದಿಂದ ಸಾರ್ವಜನಿಕ ಸಂಪರ್ಕ ರಸ್ತೆ ಹದಗೆಟ್ಟಿದ್ದು ಜನರು ಜೀವಭಯದಲ್ಲೇ ಬದುಕುವಂತಾಗಿದೆ. ಕಡಬ, ಸುಬ್ರಮಣ್ಯ ಸುತ್ತಮುತ್ತ ಹತ್ತಾರು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ನಡಿಯುತ್ತಿದ್ದು, ಗಣಿ ಇಲಾಖೆ ಅಧಿಕಾರಿಗಳು ಇತ್ತ ಕಡೆ ತಲೆ ಹಾಕಿಯೂ ಮಲಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಇದು RSS ಕುತಂತ್ರ – ಈಶ್ವರಪ್ಪ ಪೆದ್ದ: ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *