ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಾಗ ಬಿಜೆಪಿ ಮುಖಂಡನೋರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ ಘಟನೆ ಧಾರವಾಡ ಜಿಲ್ಲೆಯ ಹೊಸ ತೇಗೂರ ಗ್ರಾಮದಲ್ಲಿ ನಡೆದಿತ್ತು.
ಸದ್ಯ ಆ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲಾಗಿದೆ. ನಾಗಪ್ಪ ಗಾಣಿಗೇರ ಎಂಬ ಬಿಜೆಪಿ ಮುಖಂಡನೇ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾಗಿದ್ದ. ಮಲ್ಲಿಕ ಎಂಬವನು ಸರ್ಕಾರಿ ಜಾಗದಲ್ಲಿ ಎಗ್‍ರೈಸ್ ಅಂಗಡಿ ಇಡಲು ಮುಂದಾದಾಗ, ಬಿಜೆಪಿ ಮುಖಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ಮಲ್ಲಿಕ ಪರ ನಾಗಪ್ಪನಿಗೆ ಮಾತನಾಡಲು ಬಂದಿದ್ದ ಮಡಿವಾಳೆಪ್ಪನಿಗೆ, ನಾಗಪ್ಪ ಪಿಸ್ತೂಲ್ ತೊರಿಸಿದ್ದ. ಈ ಪ್ರಕರಣ ನಡೆದ ನಂತರ ಮಡಿವಾಳೆಪ್ಪ ಗರಗ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದ. ನಾಗಪ್ಪ ನನಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ ನಿಂದ ಹೊಡೆಯಲು ಯತ್ನ ನಡೆದಿದೆ ಎಂದು ದೂರು ಕೊಟ್ಟಿದ್ದನು. ಇದನ್ನೂ ಓದಿ: ಇಟಲಿಯ ತಾಯಿ, ಭಾರತದ ತಂದೆ – ರಾಹುಲ್ ಗಾಂಧಿ ವಿರುದ್ಧ ಅನಿಲ್ ವಿಜ್ ಕಿಡಿ
ಪ್ರಕರಣಕ್ಕೆ ಸಂಬಂಧಿಸಿ ಗರಗ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ನಾಗಪ್ಪನ ಮೇಲೆ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಗಪ್ಪನಿಗೆ ಹಿಂದಿನ ಯಾವುದೇ ಕ್ರಿಮಿನಲ್ ರೆಕಾರ್ಡ್ ಇಲ್ಲದ ಕಾರಣ ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಬಂಧಿಸುವದಾದರೆ ಬಂಧಿಸುತ್ತೆವೆ ಎಂದು ಎಸ್‍ಪಿ ಕೃಷ್ಣಕಾಂತ ಹೇಳಿದ್ದಾರೆ. ಇನ್ನು ವಶಕ್ಕೆ ಪಡೆದ ಪಿಸ್ತೂಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.