ಹಾಸನ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ರೈತರು ಬೇಸಾಯದ ಜೊತೆಗೆ ಹೈನುಗಾರಿಕೆ ಮೇಲೂ ಹೆಚ್ಚು ಅವಲಂಬಿತರಾಗಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಪಶುಪಾಲನೆ ಹಾಗೂ ಪಶುವೈದ್ಯಕೀಯ ಇಲಾಖೆ ಮಾಡಬೇಕಿದೆ ಎಂದು ಶಾಸಕರಾದ ಪ್ರೀತಂ.ಜೆ.ಗೌಡ ತಿಳಿಸಿದ್ದಾರೆ.
ನಗರದ ಸಂತೆ ಪೇಟೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕರ ಕಚೇರಿ ಹಾಗೂ ತರಬೇತಿ ಕಟ್ಟಡಗಳನ್ನು ಪ್ರೀತಂ ಗೌಡ ಉದ್ಘಾಟಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತಿವೃಷ್ಠಿ, ಅನಾವೃಷ್ಠಿ ಕೃಷಿಕರ ಲಾಭ ಹಾಳು ಮಾಡಿದ್ರೂ, ಹೈನುಗಾರಿಕೆ ರೈತಾಪಿ ವರ್ಗದ ಬದುಕು ಉಳಿಸುತ್ತಿದೆ ಎಂದರು. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ
ಜಾನುವಾರುಗಳ ಆರೋಗ್ಯ ಸುರಕ್ಷತೆಯ ಜವಾಬ್ದಾರಿ ಪಶುವೈದ್ಯಕೀಯ ಇಲಾಖೆಯದ್ದಾಗಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಹೈನುಗಾರಿಕೆ ಪ್ರಧಾನ ಕಸುಬು. ಇದೇ ಅವರ ಆದಾಯ ಮೂಲವಾಗಿದೆ. ಜೊತೆಗೆ ಕುರಿ, ಕೋಳಿ ಸಾಕಾಣಿಕೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರ ಪಶುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜೊತೆಗೆ ತಮ್ಮ ಶ್ರಮವನ್ನು ಲಾಭದಾಯಕವಾಗಿಸಿಕೊಳ್ಳುವ ಬಗ್ಗೆ ಸೂಕ್ತ ತರಬೇತಿ ಒದಗಿಸಿ ಎಂದು ಮನವಿ ಮಾಡಿದರು.
ರೈತರಿಗೆ ಬೇಕಾದ ಮಾಹಿತಿ ಮಾರ್ಗದರ್ಶನಕ್ಕೆ ಸೂಕ್ತ ನಿಗದಿತ ಸ್ಥಳ ಬೇಕಾಗಿತ್ತು. ಜೊತೆಗೆ ವೈದ್ಯಾಧಿಕಾರಿಗಳು ಪಶುವೈದ್ಯಕೀಯ ಸಿಬ್ಬಂದಿಗೂ ತರಬೇತಿ ನೀಡುವ ಮೈಸೂರು ವಿಭಾಗದ ಕಚೇರಿ ಹಾಸನದಲ್ಲಿ ಪ್ರಾರಂಭವಾಗಿರುವುದು ಸಂತೋಷದ ವಿಚಾರ. ಕಟ್ಟಡಗಳ ಉಳಿಕೆ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಮೂಲಕ ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ ಅವರು ಮಾತನಾಡಿದ್ದು, ಹೈನುಗಾರಿಕೆ ಉತ್ತಮವಾಗಿರುವ ದೇಶಗಳಲ್ಲಿ ಆರ್ಥಿಕತೆಯೂ ಉತ್ತಮವಾಗಿರುತ್ತದೆ. ಪಶುಪಾಲನಾ ಇಲಾಖೆ ಅತ್ಯಂತ ಪ್ರಧಾನವಾಗಿದೆ. ಅದು ಶಕ್ತಿಯುತವಾಗಿದ್ದರೆ, ರೈತರು ಸಬಲರಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ರಾಸುಗಳಿದ್ದು, ಅಧಿಕ ಪ್ರಮಾಣದಲ್ಲಿ ಹಾಲು ಉತ್ಪಾದನೆ ನಡೆಯುತ್ತಿದೆ. ಇಲಾಖೆ ಗುಣಾತ್ಮಕ ಪರಿವರ್ತನೆ ಕಾರ್ಯಕ್ರಮಗಳಿಗೆ ಒತ್ತು ನೀಡದರೆ ರೈತರಿಗೂ ಅನುಕೂಲವಾಗಲಿದೆ. ರೈತ ಸಂಜೀವಿನಿ ಜಾನುವಾರು ವಿಮಾ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರಾಸುಗಳ ಅನಿರೀಕ್ಷಿತ ಸಾವಿನಿಂದ ಕೃಷಿಕರು ಆರ್ಥಿಕ ನಷ್ಟ ಎದುರಿಸುವ ಸಾಮಥ್ರ್ಯವಿದೆ ಎಂದರು.
ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ಯೆಯಾದ ದಿನ. ಇಂದು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದ ಎಲ್ಲರ ನೆನೆಪಿಗಾಗಿ ಹುತಾತ್ಮರ ದಿನವಾಗಿ ಆಚರಿಸಲಾಗಿದೆ. ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಉಳಿಸಿಕೊಳ್ಳೋಣ. ನೂತನ ಕಟ್ಟಡದ ಮೂಲಭೂತ ಸೌಕರ್ಯಕ್ಕಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಜಾನ್ವಿ, ನನ್ನ ಮಧ್ಯೆ ಹಲವು ಅಂಶ ಒಂದೇ ರೀತಿ ಇದ್ದರೂ, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಲ್ಲ: ಸಾರಾ
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಕೆ.ಆರ್.ರಮೇಶ್ ಮಾತನಾಡಿ, 80 ವರ್ಷಗಳ ಹಿಂದಿನ ಕಟ್ಟಡ ಶಿಥಿಲವಾಗಿದ್ದ ಕಾರಣ ಒಟ್ಟು 125 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ರಾಜ್ಯದ ಮೈಸೂರು ವಿಭಾಗದ ತರಬೇತಿ ಕೇಂದ್ರ ಹಾಸನದಲ್ಲಿ ಪ್ರಾರಂಭವಾಗುತ್ತಿದೆ. ಇಲ್ಲಿ ಪಶುವೈದ್ಯರಿಗೆ ಬುನಾದಿ ತರಬೇತಿ ಹಾಗೂ ರೈತರಿಗೆ ತರಬೇತಿ ನೀಡಲಾಗುತ್ತದೆ. ಇಲ್ಲಿ ಅತ್ಯಂತ ವ್ಯವಸ್ಥಿತ ಸೌಲಭ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷರಾದ ಮೋಹನ್, ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಈ.ಕೃಷ್ಣೇಗೌಡ, ಪಶು ವೈದ್ಯಕೀಯ ತರಬೇತಿ ಸಂಸ್ಥೆ ಉಪ ನಿರ್ದೇಶಕರಾದ ನಾಗರಾಜ್, ಕೆ.ಅರ್ ಐ.ಡಿ.ಎಲ್ ಸಂಸ್ಥೆಯ ಮಹದೇವ್ ಪ್ರಸಾದ್ ಮತ್ತಿತರರು ಹಾಜರಿದ್ದರು.