ಬೆಂಗಳೂರು: ಭೀಕರ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ ಸಮನ್ವಿ ಸಾವಿಗೆ ಹಿರಿಯ ನಟಿ ತಾರಾ ಕಂಬನಿ ಮಿಡಿದಿದ್ದಾರೆ.
ಸಮನ್ವಿ ತುಂಬಾ ಪ್ರತಿಭಾವಂತೆ. ಮಾಡೆಲ್ ಥರಾನೆ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳಿಲ್ಲ ಎಂಬ ಸುದ್ದಿಯನ್ನು ನನ್ನಿಂದ ನಂಬುವುದಕ್ಕೇ ಆಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದು ನಟಿ ವಿಷಾದಿಸಿದ್ದಾರೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು
ನಾನು ಬೆಂಗಳೂರಿನಲ್ಲಿಲ್ಲ, ಹೊರಗಡೆ ಇದ್ದೇನೆ. ಅದ್ಯಾಕೋ ಒಂದೇ ಸಮನೆ ಫೋನ್ ಕರೆಗಳು ಬರುತ್ತಿದ್ದವು. ಏನು ಅಂತ ವಿಚಾರಿಸಿದಾಗ ಸಮನ್ವಿ ಇಲ್ಲ ಅಂತ ಹೇಳಿದರು. ಈ ಸುದ್ದಿ ಕೇಳಿ ನನಗೆ ಶಾಕ್ ಆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದ ತಾಯಿ-ಮಕ್ಕಳು ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು. ಎಲ್ಲರೂ ನನ್ನ ಜೊತೆ ಚೆನ್ನಾಗಿದ್ದರು ಎಂದು ನೆನೆದಿದ್ದಾರೆ.
ಸಮನ್ವಿ ತಾಯಿ ಅಮೃತಾ ನಾಯ್ಡು ತುಂಬು ಗರ್ಭಿಣಿ. ಶೋನಲ್ಲಿ ಅವಳಿಂದ ಹೆಚ್ಚು ಡ್ಯಾನ್ಸ್ ಮಾಡಿಸಲು ಆಗಲ್ಲ. ಆಕೆಗೆ ತುಂಬಾ ಒತ್ತಡ ಹಾಕಿದಂತಾಗುತ್ತದೆ ಎಂಬ ಕಾರಣಕ್ಕೆ ಶೋನಿಂದ ಎಲಿಮಿನೇಷನ್ ಮಾಡಿದ್ದೆವು. ಅದಾದ ಬಳಿಕವೂ ಆಕೆ ಫೋನ್ ಮಾಡಿ ನನ್ನೊಟ್ಟಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದಳು. ಒಮ್ಮೆ ನನ್ನನ್ನು ಭೇಟಿಯಾಗಬೇಕು ಎನ್ನುತ್ತಿದ್ದಳು. ನನಗೆ ಲೊಕೇಷನ್ ಕಳುಹಿಸಿ, ನಾನೇ ಕಾರು ಕಳುಹಿಸುತ್ತೇನೆ ಬಾ ಎಂದು ತಿಳಿಸಿದ್ದೆ. ಇಲ್ಲ ಅಮ್ಮ ಇನ್ನೊಮ್ಮೆ ಭೇಟಿಯಾಗುತ್ತೇನೆ ಎಂದಿದ್ದಳು. ಆಗ ಸಮನ್ವಿ ಕೂಡ ನನ್ನ ಜೊತೆ ಮಾತನಾಡಿದ್ದಳು ಎಂದು ನೆನೆಯುತ್ತಾ ತಾರಾ ದುಃಖ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೀಟೂ ಕೇಸಲ್ಲಿ ಅರ್ಜುನ್ ಸರ್ಜಾಗೆ ರಿಲೀಫ್
ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ನನ್ನಮ್ಮ ಸೂಪರ್ ಸ್ಟಾರ್ ಶೋನ ಸ್ಪರ್ಧಿ ಸಮನ್ವಿ ದಾರುಣವಾಗಿ ಮೃತಪಟ್ಟ ಘಟನೆ ಕೋಣನ ಕುಂಟೆ ಬಳಿ ನಡೆದಿದೆ.