ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿ, ಕುತೂಹಲ ಮೂಡಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಅಂತಿಮ ಕ್ಷಣದಲ್ಲಿ ಕೆಎಚ್‍ಬಿ ಬಣದ ಪರ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷಗಾದಿ ತಪ್ಪಿಸಿದ್ದಾರೆ.
32 ಸಂಖ್ಯಾ ಬಲದ ನಗರಸಭೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಸೇರಿದಂತೆ 16 ಮತಗಳ ಬಲ ಇತ್ತು. ಇತ್ತ ಕೆಎಚ್‍ಬಿ ಬಣದಲ್ಲೂ ಸಹ ಕೆಎಚ್‍ಬಿ ಬಣದ ಸದಸ್ಯರು, ಜೆಡಿಎಸ್-ಬಿಜೆಪಿ ಸದಸ್ಯರು ಸೇರಿ 16 ಮತಗಳ ಬಲವಿತ್ತು. ಇದನ್ನೂ ಓದಿ: ಸಣ್ಣ ವಯಸ್ಸಿನಿಂದಲೇ ಸೇವಾ ಮನೋಭಾವವನ್ನು ಬೆಳೆಸಬೇಕು: ಎಂ.ವೆಂಕಯ್ಯ ನಾಯ್ಡು
ಚುನಾವಣೆ ವೇಳೆ ಪರಸ್ಪರರು 16 ಮತಗಳನ್ನು ಗಳಿಸಿ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆಯಾಗುವ ಸಂಭಾವ್ಯತೆ ಇತ್ತು. ಆದರೆ ಅಂತಿಮ ಕ್ಷಣದಲ್ಲಿ ಬಂದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಕೆಎಚ್‍ಬಿ ಬಣದ ಅಭ್ಯರ್ಥಿ ಪರ ಕೈ ಎತ್ತಿ ಮತ ಚಲಾಯಿಸುವ ಮೂಲಕ ಕೆಎಚ್‍ಬಿ ಬಣದ ರೂಪಾ ಆನಂತರಾಜು ಗೌರಿಬಿದನೂರು ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲುನುಭವಿಸುವಂತಾಗಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಶಿವಶಂಕರರೆಡ್ಡಿ ಅವರಿಗೆ ಮುಖಭಂಗವಾಗಿದೆ.
ಕಾಂಗ್ರೆಸ್ ಪಕ್ಷದ ಆಂತರಿಕ ಒಪ್ಪಂದದಂತೆ ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ಬಸವರಾಜ್ ರಾಜೀನಾಮೆಯಿಂದ ಅಧ್ಯಕ್ಷಗಾದಿಗೆ ಚುನಾವಣೆ ನಡೆದಿತ್ತು. ಈ ಬಾರಿ ಕಾಂಗ್ರೆಸ್ ನಿಂದ ರಾಜೇಶ್ವರಿ ನಾಮಪತ್ರ ಸಲ್ಲಿಸಿದ್ರು. ಪ್ರಭಾರಿ ಉಪವಿಭಾಗಾಧಿಕಾರಿ ಗಣಪತಿಶಾಸ್ತ್ರೀ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು. ತೀವ್ರ ಪೈಪೋಟಿ ಹಿನ್ನೆಲೆ ಚಿಕ್ಕಬಳ್ಳಾಪುರ ಡಿವೈಎಸ್‍ಪಿ ವಾಸುದೇವ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಕಾಂಗ್ರೆಸ್ ಗೆ ಅಧ್ಯಕ್ಷಗಾದಿ ತಪ್ಪಿಸುವಲ್ಲಿ ಎಲ್ಲರೂ ಒಂದಾಗಿ ಜಯಗಳಿಸಿದ್ದಾರೆ. ಇದನ್ನೂ ಓದಿ: ತಜ್ಞರ ವರದಿಯ ಆಧಾರದ ಮೇಲೆ ಸರ್ಕಾರ ಕ್ರಮ ತಗೆದುಕೊಳ್ಳುತ್ತೆ: ಭಗವಂತ್ ಖೂಬಾ