ಲಂಡನ್: ಆನ್‍ಲೈನ್ ನಲ್ಲಿ ಹಲವು ಬಾರಿ ನಾವು ಬುಕ್ ಮಾಡುವುದೇ ಒಂದು ಆದರೆ ಬರುವುದೇ ಇನ್ನೊಂದು. ಇಂತಹ ಸಾಕಷ್ಟು ವರದಿಗಳಾಗಿವೆ. ಅಂತೆಯೇ ವ್ಯಕ್ತಿಯೊಬ್ಬರು ಐಫೋನ್ ಬುಕ್ ಮಾಡಿದ್ರೆ, ಆತನಿಗೆ ಆನ್‍ಲೈನ್ ನಲ್ಲಿ ಚಾಕೊಲೇಟ್ ಬಂದಿದೆ. ಇದರಿಂದ ವ್ಯಕ್ತಿ 1 ಲಕ್ಷ ರೂ. ನಷ್ಟವನ್ನು ಅನುಭವಿಸಿದ್ದಾರೆ.
ಆನ್‍ಲೈನ್ ಶಾಪಿಂಗ್ ನಲ್ಲಿ ಗ್ರಾಹಕರೊಬ್ಬರು ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದಾರೆ. ಆದರೆ ಪೇಪರ್ ನಲ್ಲಿ ಸುತ್ತಿದ ಎರಡು ಚಾಕೊಲೇಟ್ ಗಳು ಬಂದಿದ್ದು, ಅದನ್ನು ನೋಡಿ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಇದನ್ನೂ ಓದಿ: ನೈಟ್ ಕರ್ಫ್ಯೂ – ಸರ್ಕಾರದ ವಿರುದ್ಧ ಹೋಂಸ್ಟೇ, ರೆಸಾರ್ಟ್ ಮಾಲೀಕರ ಅಸಮಾಧಾನ
ಏನಿದು ಘಟನೆ?
ಇಂಗ್ಲೆಂಡ್‍ನ ಲೀಡ್ಸ್‍ನ ಡೇನಿಯಲ್ ಕ್ಯಾರೊಲ್ ಆನ್‍ಲೈನ್ ನಲ್ಲಿ 1 ಲಕ್ಷ ರೂ. ಮೌಲ್ಯದ ಐಫೋನ್ 13 ಪ್ರೊ ಮ್ಯಾಕ್ಸ್ ಅನ್ನು ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿ ಎರಡು ವಾರಗಳಾದರೂ ಬಂದಿರಲಿಲ್ಲ. ಕೆಲ ದಿನಗಳ ವಿಳಂಬದ ನಂತರ ಬುಕ್ ಮಾಡಿದ್ದ ಬಾಕ್ಸ್ ಬಂದಿತು. ನಂತರ ಖುಷಿಯಿಂದ ಕವರ್ ಓಪನ್ ಮಾಡಿದ್ದಾರೆ. ಆದರೆ ಅದನ್ನು ತೆಗೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು.
ಡೇನಿಯಲ್‍ಗೆ ಫೋನ್ ಬದಲಾಗಿ ರೋಲ್‍ನಲ್ಲಿ ಸುತ್ತಿದ ಎರಡು ಕ್ಯಾಡ್ಬರಿ ವೈಟ್ ಓರಿಯೊ ಚಾಕೊಲೇಟ್ ಬಂದಿತ್ತು. ಇದನ್ನು ಕಂಡು ಅವರು ದಿಗ್ಭ್ರಮೆಗೊಂಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡೇನಿಯಲ್, ನಾನು ಡಿಎಚ್‍ಎಲ್ ವೆಬ್‍ಸೈಟ್ ಮೂಲಕ ಡಿಸೆಂಬರ್ 2 ರಂದು ಫೋನ್ ಅನ್ನು ಆರ್ಡರ್ ಮಾಡಿದ್ದೆ. ಡಿಸೆಂಬರ್ 17 ರಂದು ನನಗೆ ಫೋನ್ ಡೆಲಿವರಿ ಮಾಡಬೇಕಿತ್ತು. ಆದರೆ ಅದು ಬರಲಿಲ್ಲ. ನಂತರ ನಾನೇ ಅಲ್ಲಿಗೆ ಹೋಗಿ ವಿಚಾರಿಸಿದಾಗ ನಿಮ್ಮ ಆರ್ಡರ್ ಶನಿವಾರ ಸಿಗುತ್ತೆ ಎಂದು ಮಾಹಿತಿಯನ್ನು ನೀಡಿದರು.
ನಾನೇ ಸೋಮವಾರ ಆ ಪಾರ್ಸೆಲ್ ಸಂಗ್ರಹಿಸಲು 24-ಮೈಲಿ ಹೋಗಬೇಕಾಯಿತು. ಆದರೂ ಹೋಗಿ ನನ್ನ ಆರ್ಡರ್ ಅನ್ನು ತೆಗೆದುಕೊಂಡು ಮನೆಗೆ ಬಂದೆ. ಆ ಬಾಕ್ಸ್ ತುಂಬಾ ಹಗುರವಾಗಿತ್ತು. ಆಗ ನಾನು ಅದನ್ನು ತೆಗೆದು ನೋಡಿದಾಗ ಶಾಕ್ ಆಯ್ತು. ಅದರಲ್ಲಿ ನಾನು ಆರ್ಡರ್ ಮಾಡಿದ ಫೋನ್ ಬದಲಿಗೆ ರೋಲ್ ನಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟ್ ಇತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 14 ತಿಂಗಳ ನಂತರ ಭೇಟಿ – ಪಾಲಕನನ್ನು ಸುತ್ತುವರೆದು ಸೊಂಡಿಲಿನಿಂದ ಅಪ್ಪಿಕೊಂಡ ಆನೆಗಳು
ತಮಗಾದ ಮೋಸವನ್ನು ಡೇನಿಯಲ್ ಟ್ವಿಟ್ಟರ್‌ನಲ್ಲೂ ಹಂಚಿಕೊಂಡಿದ್ದಾರೆ. ಡಿಎಚ್‍ಎಲ್ ಗೆ ಈ ಕುರಿತು ಡೇನಿಯಲ್ ದೂರು ನೀಡಿದ್ದಾರೆ. ಈ ಬಗ್ಗೆ ಡಿಎಚ್‍ಎಲ್ ವಕ್ತಾರರು ಪ್ರತಿಕ್ರಿಯಿಸಿದ್ದು, ಘಟನೆ ಕುರಿತು ತನಿಖೆಯನ್ನು ಪ್ರಾರಂಭಿಸಲಾಗಿದ್ದು, ನಷ್ಟವಾದ ಆರ್ಡರ್ ಅನ್ನು ಮರುಕಳುಹಿಸುತ್ತೇವೆ. ಅಲ್ಲಿಯವರೆಗೂ ನಾವು ನಿಮ್ಮ ಸಂಪರ್ಕದಲ್ಲೇ ಇರುತ್ತೇವೆ ಎಂದು ತಿಳಿಸಿದ್ದಾರೆ.