ಕೋವಿಡ್ ಸೋಂಕಿತೆ ಸತ್ತು 6 ತಿಂಗಳ ಬಳಿಕ ಬಂತು ನೆಗೆಟಿವ್ ವರದಿ

Public TV
2 Min Read
COVID REPORT IN WOMEN

-ಆರೋಗ್ಯ ಇಲಾಖೆ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಯಡವಟ್ಟು

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಕೋವಿಡ್ ಅಂತಲೇ 14 ದಿನಕಾಲ ಚಿಕಿತ್ಸೆ ಪಡೆದು ಕೊನೆಗೆ ಸಾವನ್ನಪ್ಪಿದ ಮಹಿಳೆಯ ಕೋವಿಡ್ ರಿಪೋರ್ಟ್ 6 ತಿಂಗಳ ನಂತರ ನೆಗೆಟಿವ್ ಬಂದಿದೆ. ಕೋವಿಡ್ ಸಾವಿನ ಪರಿಹಾರಕ್ಕಾಗಿ ಮೃತಳ ಮಕ್ಕಳು ಓಡಾಡಿದ್ದಕ್ಕೆ ವರದಿಯೇ ಬದಲಾಗಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಅಂತ ಮೃತಳ ಮಕ್ಕಳು ಈಗ ಹೋರಾಟ ನಡೆಸಿದ್ದಾರೆ.

RCR CHILDRENS 1

ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದ 54 ವರ್ಷದ ಪಾರ್ವತಮ್ಮ ಜ್ವರ ಅಂತ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕಳೆದ ಮೇ 25ರಂದು ದಾಖಲಾಗಿದ್ದರು. ಮಹಿಳೆಯಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ವೈದ್ಯರು ಸಿಟಿ ಸ್ಕ್ಯಾನ್ ಮಾಡಿಸಿದ್ದರು. ಸಿಟಿ ಸ್ಕ್ಯಾನ್ ವರದಿ ಪ್ರಕಾರ ಕೋವಿಡ್ ಎಂದು ವೈದ್ಯರು ಪರಿಗಣಿಸಿ, ಮಹಿಳೆಯ ಗಂಟಲು ಮಾದರಿ ಸಂಗ್ರಹಿಸಿ ಎಸ್‌ಆರ್‌ಎಫ್‌ಐಡಿ ನೀಡಿ 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮಹಿಳೆಯ ಅಂತ್ಯಕ್ರಿಯೆಯೂ ಸಹ ಕೋವಿಡ್ ನಿಯಮದಂತೆ ನೆರವೇರಿಸಲಾಯಿತು. ಇದನ್ನೂ ಓದಿ: ಓಮಿಕ್ರಾನ್ ರೋಗಿಗಳ ಚಿಕಿತ್ಸೆಗೆ ಕೊಟ್ಟಿದ್ದು ವಿಟಮಿನ್, ಪ್ಯಾರಾಸಿಟಮಾಲ್ ಮಾತ್ರೆ

CKM SCHOOL CORONA 4

ಆ ಬಳಿಕ ಮೃತ ಮಹಿಳೆಯ ಮಕ್ಕಳಾದ ಪ್ರಭು ಮತ್ತು ನಾಗರಾಜ್ ಸರ್ಕಾರದ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿದ್ದರು. ಆ ವೇಳೆ ಮೃತ ಮಹಿಳೆಗೆ ಪರಿಹಾರ ಬರಬೇಕಾದರೇ ಕೋವಿಡ್ ರಿಪೋರ್ಟ್ ಕಡ್ಡಾಯವಾಗಿ ತೆಗೆದುಕೊಂಡು ಬರಲು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಸೂಚನೆ ನೀಡಿದರು. ಹೀಗಾಗಿ ಮೃತ ಮಹಿಳೆಯ ಮಕ್ಕಳು ಕೋವಿಡ್ ರಿಪೋರ್ಟ್ ಪಡೆಯಲು ಎಸ್‌ಆರ್‌ಎಫ್‌ಐಡಿ ಹಿಡಿದು ರಾಯಚೂರಿನ ಡಿಚ್‍ಒ ಕಚೇರಿ, ಇತ್ತ ಸಿಂಧನೂರಿನ ಖಾಸಗಿ ಆಸ್ಪತ್ರೆ ಹಾಗೂ ಟಿಎಚ್‍ಒ ಕಚೇರಿಗೆ ಅಲೆದರೂ 6 ತಿಂಗಳ ಕಾಲ ಕೋವಿಡ್ ರಿಪೋರ್ಟ್ ಮಾತ್ರ ಮೃತಳ ಮಕ್ಕಳಿಗೆ ಸಿಗಲೇ ಇಲ್ಲ.

ಅತ್ತ ತಾಯಿಯೂ ಇಲ್ಲ, ಇತ್ತ ಸರ್ಕಾರದ ಪರಿಹಾರ ಹಣವೂ ಇಲ್ಲದೆ ಮೃತ ಮಹಿಳೆಯ ಮಕ್ಕಳು ಪರದಾಟ ನಡೆಸಿದ್ದಾರೆ. ಸಿಂಧನೂರಿನ ಟಿಎಚ್‍ಒ ಕಚೇರಿಗೆ ಮೃತ ಮಹಿಳೆಯ ಮಕ್ಕಳು ಹಾಗೂ ಸ್ಥಳೀಯರು ಹೋಗಿ ಒತ್ತಡ ಹಾಕಿದಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳ ಲೋಪದೊಷ ಕಂಡು ಬಂದಿದೆ. ಸಿಂಧನೂರು ಟಿಎಚ್‍ಒ ಅಯ್ಯಣ್ಣ ಗೌಡ ಖಾಸಗಿ ಆಸ್ಪತ್ರೆ ಸಿಬ್ಬಂದಿ ಹಾಗೂ ಸಿಂಧನೂರು ತಾಲೂಕು ಆಸ್ಪತ್ರೆಯ ಲ್ಯಾಬ್ ಟೆಕ್ನಿಷನ್ ಜೊತೆಗೆ ಸಂಧಾನ ಸಭೆ ನಡೆಸಿ ಪರಿಹಾರದ ಹಣ ಇಬ್ಬರು ಭರಿಸಬೇಕೆಂದು ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಈಗ ಅಧಿಕಾರಿಗಳು ಎಸ್‌ಆರ್‌ಎಫ್‌ಐಡಿ ಆಧಾರದ ಸ್ಯಾಂಪಲ್‍ಗೆ ನೆಗೆಟಿವ್ ಎಂದು ರಿಪೋರ್ಟ್ ನೀಡಿದ್ದಾರೆ. ರಿಪೋರ್ಟ್ ನೀಡಲು ವಿಳಂಬ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗಬೇಕು ಅಂತ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ

ಒಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಡಿದ ಯಡವಟ್ಟಿನಿಂದ ಮಹಿಳೆ ಸತ್ತು 6 ತಿಂಗಳ ಬಳಿಕ ಈಗ ಕೋವಿಡ್ ವರದಿ ನೆಗೆಟಿವ್ ಅಂತ ಬಂದಿದೆ. ಆದರೆ ಕೋವಿಡ್ ರಿಪೋರ್ಟ್ ಇಲ್ಲದೆ ವೈದ್ಯರು ಮಹಿಳೆಗೆ ಕೋವಿಡ್ ಚಿಕಿತ್ಸೆ ಏಕೆ ನೀಡಿದ್ದು, ಅನ್ನೋದು ಮೃತರ ಕುಟುಂಬಸ್ಥರ ಪ್ರಶ್ನೆ? ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪರಿಹಾರ ನೀಡುವಂತೆ ಮೃತರ ಸಂಬಂಧಿಕರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವಿಶ್ವದಲ್ಲೇ ಮೊದಲು – ಈಕ್ವೆಡಾರ್‌ನಲ್ಲಿ 5 ವರ್ಷದ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕಡ್ಡಾಯ

Share This Article
Leave a Comment

Leave a Reply

Your email address will not be published. Required fields are marked *