ಬಲವಂತದ ಮತಾಂತರ ಜಾಮೀನುರಹಿತ ಅಪರಾಧ

Public TV
2 Min Read
Belagavi Suvarna Soudha VidhanaSabhe

– ಧರ್ಮ ಬದಲಿಸುವ ಮುನ್ನ ಅರ್ಜಿ ಸಲ್ಲಿಕೆ ಕಡ್ಡಾಯ
– ಸೋಮವಾರ ಬಳಿಕ ಬಿಲ್ ಪಾಸ್‍ಗೆ ಸರ್ಕಾರ ಪ್ಲ್ಯಾನ್

ಬೆಂಗಳೂರು: ಪ್ರಸಕ್ತ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಮಸೂದೆ ಮಂಡನೆಗೆ ತೀರ್ಮಾನಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021ರ ಮಸೂದೆಯನ್ನು ಸಿದ್ಧಪಡಿಸಿದೆ. ಸೋಮವಾರದ ಸಂಪುಟ ಸಭೆಯಲ್ಲಿ ಈ ಮಸೂದೆಗೆ ಅನುಮೋದನೆ ಪಡೆದು, ಬುಧವಾರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ಬೊಮ್ಮಾಯಿ ಸರ್ಕಾರ ಯೋಚಿಸಿದೆ.

Belagavi Suvarna Soudha VidhanaSabhe 3

ಒತ್ತಾಯ, ಆಮಿಷವೊಡ್ಡಿ ನಡೆಸಲಾಗುವ ಮತಾಂತರಗಳನ್ನು ನಿಷೇಧಿಸುವ ಅಂಶ ಪ್ರಸ್ತಾವಿತ ಮಸೂದೆಯಲ್ಲಿದೆ. ಆದರೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಹ ಮತಾಂತರ ವಿಧೇಯಕಕ್ಕೆ ನಮ್ಮ ವಿರೋಧ ಇದೆ ಎಂದಿದ್ದಾರೆ. ಕಾರಣ ನೀಡಿ ಎಂದು ಸರ್ಕಾರವನ್ನು ಕೇಳಿದ್ದಾರೆ. ಪ್ರಸ್ತಾವಿತ ಮಸೂದೆಯಲ್ಲಿ ಈ ಕೆಳಕಂಡ ಅಂಶಗಳಿವೆ. ಇದನ್ನೂ ಓದಿ: ರಾಜ್ಯ ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ: ಡಿಕೆಶಿ

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021
ಬಲವಂತದ ಮತಾಂತರ ಜಾಮೀನುರಹಿತ ಅಪರಾಧ ಮತ್ತು ಅಸಿಂಧುವಾಗಿದೆ. ಇದನ್ನು ನೇರ ವಿಚಾರಣೆಗೆ ಒಳಪಡಿಸಬಹುದು. ಉಡುಗೊರೆ, ಕೆಲಸ, ಉಚಿತ ಶಿಕ್ಷಣ, ವಿವಾಹದ ಆಮಿಷ ಒಡ್ಡಿ ಮತಾಂತರ ಮಾಡುವಂತಿಲ್ಲ. ಭಾವನಾತ್ಮಕವಾಗಿ ಸೆಳೆದು ಮತಾಂತರ ಮಾಡುವುದು ಅಪರಾಧ. ಅಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಆ ಮದುವೆ ಅಸಿಂಧು ಎಂದು ಘೋಷಿಸಲು ಕೌಟುಂಬಿಕ ನ್ಯಾಯಾಲಯಕ್ಕೆ ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. ಸಾಮೂಹಿಕ ಮತಾಂತರದಲ್ಲಿ ಶಿಕ್ಷಣ ಸಂಸ್ಥೆ, ಆಶ್ರಮ, ಧಾರ್ಮಿಕ ಮಿಷನರಿ, ಎನ್‍ಜಿಓ ಪಾಲ್ಗೊಳ್ಳುವಂತಿಲ್ಲ. ಸಾಮೂಹಿಕ ಮತಾಂತರದಲ್ಲಿ ಭಾಗಿಯಾದ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸಲಾಗುವುದು.

suvarna soudha 2

ದಂಡ ಎಷ್ಟು?
ಎಸ್‍ಸಿ, ಎಸ್‍ಟಿ ಸಮುದಾಯದವರನ್ನು ಬಲವಂತವಾಗಿ ಮತಾಂತರ ಮಾಡುವ ಹಾಗಿಲ್ಲ. ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂಧ್ಯರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಬಾರದು. ಕಾಯ್ದೆ ಉಲ್ಲಂಘಿಸಿದಲ್ಲಿ ಕನಿಷ್ಠ 3ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗುವುದು. ಇತರರನ್ನು ಬಲವಂತವಾಗಿ ಮತಾಂತರಿಸಿದ್ದಲ್ಲಿ 3ರಿಂದ 5 ವರ್ಷ ಜೈಲು ಶಿಕ್ಷೆ ಮತ್ತು 25 ಸಾವಿರ ರೂ. ದಂಡ ಹಾಗೂ ಸಾಮೂಹಿಕ ಮತಾಂತರ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಲಾಗುವುದು. ಇದನ್ನೂ ಓದಿ: ರಾಜ್ಯ ಸರ್ಕಾರ ವೆಜ್ ಬೇರೆ, ನಾನ್ ವೆಜ್ ಬೇರೆ ಶಾಲೆ ತೆರೆಯಲಿ: ದಯಾನಂದ ಸ್ವಾಮೀಜಿ

ಪರಿಹಾರವೇನು?
ಬಲವಂತದ ಮತಾಂತರ ಸಾಬೀತಾದಲ್ಲಿ ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ 5 ಲಕ್ಷ ಪರಿಹಾರ ನೀಡಬೇಕಾಗುತ್ತದೆ. ಪರಿಹಾರದ ಮೊತ್ತವನ್ನು ಮತಾಂತರ ಮಾಡಿದವನಿಂದಲೇ ವಸೂಲಿ ಮಾಡಬೇಕಾಗುತ್ತದೆ. ಈ ಹಿಂದೆಯೂ ಮತಾಂತರ ಮಾಡಿದ್ದು ಸಾಬೀತಾದಲ್ಲಿ ದುಪ್ಪಟ್ಟು ದಂಡ ವಿಧಿಸಲಾಗುವುದು.

Belagavi Suvarna Soudha VidhanaSabhe 1

ಮತಾಂತರ ಪ್ರಕ್ರಿಯೆ ಹೇಗೆ?
ಧರ್ಮ ಬದಲಿಸುವ 60 ದಿನ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಮತಾಂತರ ಆಗುವವರು, ಮಾಡುವವರಿಗೆ ಡಿಸಿ, ಪೊಲೀಸ್ ಸಮ್ಮುಖದಲ್ಲಿ ವಿಚಾರಣೆ ಇರುತ್ತದೆ. ಶಾಲೆ, ಕಾಲೇಜು ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಡಿಸಿ ಸೂಚಿಸಬೇಕು. ಮತಾಂತರಗೊಂಡ ಎಸ್‍ಸಿ, ಎಸ್‍ಟಿ ವ್ಯಕ್ತಿಗಳಿಗೆ ಸಿಗುವ ಮೀಸಲಾತಿ, ಇತರೆ ಸೌಲಭ್ಯ ರದ್ದುಗೊಳಿಸುವುದು ಪ್ರಸ್ತಾವಿತ ಮಸೂದೆಯಲ್ಲಿ ಇದೆ.

Share This Article
Leave a Comment

Leave a Reply

Your email address will not be published. Required fields are marked *