ಹೈದರಾಬಾದ್: ಚಿರತೆಯ ಉಗುರು ಮತ್ತು ಕೊರೆಹಲ್ಲುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಮ್ರಾಬಾದ್ ಹುಲಿ ಸಂರಕ್ಷಿತ ಪ್ರದೇಶದ ಕುಡಿಚಿಂತಲಬೈಲು ಗ್ರಾಮದ ಮಂಡ್ಲಿ ಲಾಲು, ಕುಕ್ಕಲ ಕೃಷ್ಣಯ್ಯ, ಬಿಯಣ್ಣಿ ವೆಂಕಟೇಶ್ ಬಂಧಿತ ಆರೋಪಿಗಳು. ಕಾಡಾನೆ ದಾಳಿಯಿಂದ ತಾವು ಬೆಳೆದ ಬೆಳೆ ರಕ್ಷಿಸಲು ಕೃಷ್ಣಯ್ಯ ಅವರು ಬಲೆಯನ್ನು ಹಾಕಿದ್ದರು. ಇದರಲ್ಲಿ ಚಿರತೆಯೊಂದು ಸೆರೆಯಾಗಿ ಸತ್ತು ಹೋಗಿತ್ತು. ಆ ಮೃತ ಚಿರತೆಯ ಉಗುರು ಮತ್ತು ಕೋರೆ ಹಲ್ಲನ್ನು ತೆಗೆದು ಮಾರಾಟ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಅಮರಾಬಾದ್ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ಕೃಷ್ಣಯ್ಯ ಅವರು ತಮ್ಮ ಜಮೀನಿನಲ್ಲಿ ಬಲೆಗಳನ್ನು ಹಾಕಿದ್ದರು. ಆ ಬಲೆಗೆ ಸಿಲುಕಿ ಚಿರತೆ ಸತ್ತಿರುವುದನ್ನು ಕಂಡು ಹೆದರಿದ್ದರು. ಅಷ್ಟೇ ಅಲ್ಲದೇ ಜಮೀನಿನಲ್ಲಿ ಹಾಕಿದ್ದ ಬಲೆಯನ್ನು ತೆಗೆದು, ತಮ್ಮ ಹೊಲದಲ್ಲಿ ಚಿರತೆ ಸತ್ತಿರುವುದರ ಬಗ್ಗೆ ಅರಣ್ಯ ಬೀಟ್ ಸಿಬ್ಬಂದಿಗೆ ಮಾಹಿತಿ ನೀಡಲು ಮುಂದಾದರು.
ಆದರೆ, ಲಾಲು ಮತ್ತು ವೆಂಕಟೇಶ್ ಅವರು ಉಗುರುಗಳು ಮತ್ತು ಕೋರೆಹಲ್ಲುಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು ಎಂದು ಕೃಷ್ಣಯ್ಯ ಅವರ ಮನವೊಲಿಸಿದರು. ನಂತರ ಅವರು ಚಿರತೆಯ ಉಗುರು ಮತ್ತು ಕೋರೆಹಲ್ಲುಗಳನ್ನು ತೆಗೆದು ಮೃತದೇಹವನ್ನು ಕಾಡಿನೊಳಗೆ ಸುಟ್ಟು ಹಾಕಿದರು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?
ಕಾಡಿನಲ್ಲಿದ್ದ ಸುಟ್ಟ ಮೃತದೇಹವನ್ನು ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ, ತನಿಖೆಗೆ ವಿಶೇಷ ತಂಡವನ್ನು ರಚಿಸಿದರು. ಈ ಸಂಬಂಧ ಮೂವರಲ್ಲಿ ಇಬ್ಬರನ್ನು ಅವರ ಗ್ರಾಮದಲ್ಲಿ ಬಂಧಿಸಿದ್ದರೆ, ಮೂರನೆಯವನನ್ನು ಅಚಂಪೇಟ್ ಗ್ರಾಮದಲ್ಲಿ ಹಿಡಿಯಲಾಯಿತು. ಇದನ್ನೂ ಓದಿ: ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ