ಲಕ್ನೋ: ವಿವಾಹಿತ ಪುರುಷನೊಬ್ಬ ಎರಡನೇ ಮದುವೆಯಾಗಲು ಪ್ರಯತ್ನಿಸಿ ಮಂಟಪದಲ್ಲೇ ಸಿಕ್ಕಿ ಬಿದ್ದು, ಥಳಿತಕ್ಕೊಳಗಾದ ಘಟನೆ ಇತ್ತೀಚೆಗೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ. ಪೆಟ್ಟು ತಿಂದ ವ್ಯಕ್ತಿ ತನ್ನ ಮೊದಲ ಪತ್ನಿಯ ಕೈಯಲ್ಲೇ ಸಿಕ್ಕಿ ಬಿದ್ದಿದ್ದಾನೆ.
ವಿವಾಹಿತ ವ್ಯಕ್ತಿ ತನ್ನ ಮೊದಲ ಮದುವೆಯ ಬಗ್ಗೆ ಹುಡುಗಿಯ ಮನೆಯವರಿಗೆ ತಿಳಿಸಿರಲಿಲ್ಲ. ಆದರೂ ಆತನ ಮೊದಲ ಪತ್ನಿ ಮದುವೆಯ ಬಗ್ಗೆ ತಿಳಿದು ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲೆ ಗುಡಿಸಲು? – ಫೋಟೋ ಶೇರ್ ಮಾಡಿದ ವಿಜ್ಞಾನಿಗಳು
ಘಟನೆಯಲ್ಲಿ ಏನಾಗಿತ್ತು?
ಗೋರಖ್‍ಪುರದ ನಿವಾಸಿಯೊಬ್ಬನ ಮದುವೆಯನ್ನು ಒಂದು ವರ್ಷಗಳ ಹಿಂದೆ ನಿಶ್ಚಯಿಸಲಾಗಿತ್ತು. ಡಿಸೆಂಬರ್ 5 ರಂದು ವರ ಮೆರವಣಿಗೆಯೊಂದಿಗೆ ಹುಡುಗಿ ಮನೆಗೆ ತಲುಪಿದ್ದ. ಆದರೆ ಅದೇ ಸಮಯದಲ್ಲಿ ತನ್ನ ಮೊದಲ ಪತ್ನಿ ನಾಲ್ಕು ವರ್ಷದ ಮಗುವಿನೊಂದಿಗೆ ಸ್ಥಳಕ್ಕೆ ಆಗಮಿಸಿದ್ದರು. ಹೆಂಡತಿಯನ್ನು ನೋಡಿದ ತಕ್ಷಣ ವ್ಯಕ್ತಿ ಅಲ್ಲಿಂದ ಓಟಕ್ಕಿತ್ತಿದ್ದಾನೆ.
ವರ ಮದುವೆ ಮಂಟಪದಿಂದ ಓಡಿ ಹೋಗುತ್ತಿದ್ದುದನ್ನು ಕಂಡ ಅತಿಥಿಗಳು ಅವನನ್ನು ಹಿಡಿದು ಥಳಿಸಿದ್ದಾರೆ ಹಾಗೂ ಸ್ಥಳಕ್ಕೆ ಆಗಮಿಸಿದ ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ವರನನ್ನು ವಿಚಾರಿಸಿದ್ದಾರೆ. ಸ್ಥಳದಲ್ಲಿ ಹಾಜರಿದ್ದ ಆರೋಪಿಯ ಪತ್ನಿ ಆತ 5 ವರ್ಷಗಳ ಹಿಂದೆಯೇ ಎರಡು ಮದುವೆಯಾಗಿದ್ದ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ
ಆರೋಪಿಗೆ ನಾಲ್ಕು ವರ್ಷದ ಮಗು ಇರುವ ವಿಷಯ ಮಹಿಳೆ ಪೊಲೀಸರಿಗೆ ತಿಳಿಸಿದ್ದು, ಆತ ಮತ್ತೊಂದು ಮದುವೆಯಾಗುತ್ತಿರುವ ವಿಚಾರ ತಿಳಿದ ತಕ್ಷಣ ಮದುವೆಯನ್ನು ತಡೆಯಲು ಸ್ಥಳಕ್ಕೆ ಆಗಮಿಸಿದ್ದಾಗಿ ಹೇಳಿದ್ದಾರೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿ ವರನನ್ನು ಬಂಧಿಸಿದ್ದಾರೆ.