ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಾವಲು ನೀಡಿದ್ದ ಪೊಲೀಸ್ ವಾಹನ, ಚಾಲಕನ ನಿಯಂತ್ರಣ ತಪ್ಪಿ ಕಾಫಿತೋಟದೊಳಗೆ ಪಲ್ಟಿಯಾಗಿರುವ ಘಟನೆ ತಾಲೂಕಿನ ಮಲ್ಲೇನಹಳ್ಳಿ ಬಳಿ ನಡೆದಿದೆ.
ಶುಕ್ರವಾರ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಶಾಂತವೇರಿ ಘಾಟಿ ಮೂಲಕ ಶಿವಮೊಗ್ಗಕ್ಕೆ ಹೊರಟಿದ್ದರು. ಈ ವೇಳೆ ಡಿಕೆಶಿ ಕಾರು ತಾಲೂಕಿನ ಮಲ್ಲೇನಹಳ್ಳಿ ಬಳಿ ಹೋಗುವಾಗ ತೀವ್ರವಾದ ತಿರುವುಗಳ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಯುವಕರು ಹೋದಲೆಲ್ಲಾ ಮೋದಿ.. ಮೋದಿ..ಅಂತಿದ್ರು, ಈಗ ಮೋದಿ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ: ಸಿದ್ದರಾಮಯ್ಯ
ಅಪಘಾತದಿಂದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಒಬ್ಬರಿಗೆ ತುಸು ಹೆಚ್ಚಿನ ಗಾಯವಾಗಿದೆ. ಅಪಘಾತವಾದ ಕೂಡಲೇ ಕಾರಿನಿಂದ ಕೆಳಗೆ ಇಳಿದ ಸಿದ್ದರಾಮಯ್ಯ ಹಾಗೂ ಡಿಕೆಶಿ ಗಾಯಗೊಂಡ ಸಿಬ್ಬಂದಿಯನ್ನು ಮತ್ತೊಂದು ಗಾಡಿಯಲ್ಲಿ ಆಸ್ಪತ್ರೆಗೆ ಕಳಿಸಿದ್ದಾರೆ. ಈ ವೇಳೆ ಮಲ್ಲೇನಹಳ್ಳಿಯಲ್ಲಿ ಸಾಧಾರಣ ಮಳೆ ಸುರಿಯುತ್ತಿತ್ತು. ಮಳೆ ಮಧ್ಯೆಯೂ ಸಿದ್ದರಾಮಯ್ಯ ಛತ್ರಿ ಹಿಡಿದು ಗಾಯಾಳುಗಳನ್ನ ಆಸ್ಪತ್ರೆಗೆ ಕಳಿಸಿದ್ದಾರೆ.
ಮಧ್ಯಾಹ್ನ ಮೂರು ಗಂಟೆಗೆ ಶಿವಮೊಗ್ಗಕ್ಕೆ ಹೋಗಬೇಕಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಚಿಕ್ಕಮಗಳೂರಿನಿಂದ ತಡವಾಗಿ ಹೊರಟಿದ್ದರು. ರಸ್ತೆಯಲ್ಲಿ ಅಪಘಾತವಾದ್ದರಿಂದ ತಮ್ಮ ಪ್ರಯಾಣವನ್ನು ಕೆಲಕಾಲ ಮೊಟಕುಗೊಳಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.