ಶಿವಮೊಗ್ಗದಲ್ಲಿ ಕೊರೊನಾ ಸ್ಫೋಟ – ನರ್ಸಿಂಗ್ ಕಾಲೇಜಿನ 23 ವಿದ್ಯಾರ್ಥಿಗಳಿಗೆ ಸೋಂಕು

Public TV
2 Min Read
corona to student 1

– ನರ್ಸಿಂಗ್ ಕಾಲೇಜ್, ಆಸ್ಪತ್ರೆ ಸೀಲ್ ಡೌನ್

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ತಿಂಗಳಿನಿಂದ ಕೊರೊನಾ ಸೋಂಕು ಮಂದಗತಿಯಲ್ಲಿತ್ತು. ಆದರೆ ಇದೀಗ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸ್ಫೋಟ ಉಂಟಾಗಿದೆ. ಕೇರಳದಿಂದ ಶಿವಮೊಗ್ಗಕ್ಕೆ ಬಂದವರಿಂದಾಗಿ ಮಲೆನಾಡಿನ ಜನರಿಗೆ ಇದೀಗ ಮತ್ತೆ ಆತಂಕ ಎದುರಾಗಿದೆ.

ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಾಲೇಜ್ ಹಾಗೂ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ನಮ್ಮ ಪಕ್ಷ 300 ಸೀಟ್ ಗಳನ್ನು ಗೆಲ್ಲುವುದಿಲ್ಲ: ಗುಲಾಮ್ ನಬಿ ಆಜಾದ್

corona to student

ಶಿವಮೊಗ್ಗ ಜಿಲ್ಲೆಯಲ್ಲಿರುವ ನರ್ಸಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಅನ್ಯರಾಜ್ಯದವರೇ ಹೆಚ್ಚಿದ್ದಾರೆ. ಶಿವಮೊಗ್ಗದ ನಂಜಪ್ಪ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಕೇರಳದಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಹೀಗೆ ಕೇರಳಕ್ಕೆ ಹೋಗಿ ಬಂದ ವಿದ್ಯಾರ್ಥಿಗಳಲ್ಲಿ ಆರಂಭದಲ್ಲಿ ಶೀತ ಹಾಗೂ ಜ್ವರ ಕಾಣಿಸಿಕೊಂಡಿತ್ತು.

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಆಗ ಕೆಲ ವಿದ್ಯಾರ್ಥಿಗಳಲ್ಲಿ ಕೋವಿಡ್ ಇರುವುದು ದೃಢಪಟ್ಟಿತ್ತು. ನಂತರ ಎಚ್ಚೆತ್ತ ಜಿಲ್ಲಾಡಳಿತ ನರ್ಸಿಂಗ್ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು, ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿದಾಗ ಬರೋಬ್ಬರಿ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

coronavirus treatment in kukatpally 1024x768 1

ಯಾವಾಗ ನಂಜಪ್ಪ ನರ್ಸಿಂಗ್ ಕಾಲೇಜಿನ 23 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಯಿತೋ, ಮುಂಜಾಗ್ರತಾ ಕ್ರಮವಾಗಿ ನರ್ಸಿಂಗ್ ಕಾಲೇಜು ಹಾಗೂ ಕಾಲೇಜು ಆವರಣದಲ್ಲೇ ಇರುವ ನಂಜಪ್ಪ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ 700ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ರ್ಯಾಂಡಮ್ ಟೆಸ್ಟ್ ಮಾಡಿದೆ. ಇದನ್ನೂ ಓದಿ: ನಾಡಗೀತೆ ಪೂರ್ಣವಾಗುವವರೆಗೆ ಕದಲದ ದನ

ಈಗಾಗಲೇ 300ಕ್ಕೂ ಅಧಿಕ ಜನರಿಗೆ ನೆಗೆಟಿವ್ ವರದಿ ಬಂದಿದ್ದು, ಉಳಿದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇನ್ನು ನರ್ಸಿಂಗ್ ವಿದ್ಯಾರ್ಥಿಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ನರ್ಸಿಂಗ್ ಕಾಲೇಜಿನ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಆಸ್ಪತ್ರೆಯ ಓಪಿಡಿ ಸಂಪೂರ್ಣವಾಗಿ ಬಂದ್ ಆಗಿದೆ. ಜೊತೆಗೆ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಬಂಧಿಕರಿಗೂ ಪ್ರವೇಶ ನಿರ್ಬಂಧಿಸಲಾಗಿದೆ.

ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ. ಆದರೆ ಶಿವಮೊಗ್ಗದ ನರ್ಸಿಂಗ್ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿದ್ದರಾ, ಇಲ್ಲವೇ ಎಂಬುದು ಇದುವರೆಗೂ ನಿಗೂಢವಾಗಿದೆ. ಈ ವಿದ್ಯಾರ್ಥಿಗಳಿಂದ ಇನ್ನೆಷ್ಟು ಜನರಿಗೆ ಕೋವಿಡ್ ಸೋಂಕು ಹರಡಿದೆಯೋ ಎಂಬುದು ಮಲೆನಾಡಿಗರ ಆತಂಕಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *