– ಜನ ಶಕ್ತಿ ಮುಂದೆ ರಾಜ ಶಕ್ತಿ ಏನು ಮಾಡಲು ಆಗಲ್ಲ
ತುಮಕೂರು: ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಬಿಜೆಪಿ ಸರ್ಕಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಇವತ್ತು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ರೈತರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. 700 ಜನ ರೈತರು ಪ್ರಾಣ ತ್ಯಾಗ ಮಾಡಿದ್ದಾರೆ. ಈಗ ಪ್ರಧಾನಿ ಮೋದಿ ಅವರಿಗೆ ಜ್ಞಾನೋದಯ ಆಗಿದೆ. ಅದಕ್ಕೆ ಕೃಷಿ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಹೇಳಿದ್ದಾರೆ. ಮುಂಚಿತವಾಗಿ ತಗೊಂಡ್ರೆ ರೈತರ ಪ್ರಾಣ ಉಳಿಯುತಿತ್ತು ಎಂದು ಆರೋಪಿಸಿದರು.
ಪ್ರಾಣ ಹೋಗಲು ನೇರವಾಗಿ ಮೋದಿ ಮತ್ತು ಅವರ ಸರ್ಕಾರವೇ ಕಾರಣ. ರೈತ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಮಣಿಯಬೇಕಾಗುತ್ತದೆ. ಜನ ಶಕ್ತಿ ಮುಂದೆ ರಾಜ ಶಕ್ತಿ ಏನೂ ಮಾಡಲು ಆಗಲ್ಲ. ಜನ ಶಕ್ತಿ ಅಂಕುಶದಲ್ಲಿ ರಾಜ ಶಕ್ತಿ ಇರಬೇಕು. ರೈತರಿಗೆ ದೊಡ್ಡ ನಮಸ್ಕಾರ, ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು. ಮೋದಿ ಜೀ ನೀವು ರೈತರ ವಿರುದ್ಧ ಇರಲು ಸಾಧ್ಯವಿಲ್ಲ. ಇದನ್ನು ಅನ್ನದಾತರು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 70 ವರ್ಷದ ದೇಶದ ಸಾಧನೆಯನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಭೂಪೇಶ್ ಬಘೇಲ್
ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ಯಡಿಯೂರಪ್ಪ ಜೀ, ನಿಮಗೆ ನಾಚಿಕೆ ಆಗಲ್ವಾ. ಸಿಲಿಂಡರ್ ಬೆಲೆ ಜಾಸ್ತಿ ಆದಾಗ ಶೊಭಾ ಕರಂದ್ಲಾಜೆ ಅವರು ತಲೆ ಮೇಲೆ ಹೊತ್ತು ಹೋರಾಟ ಮಾಡಿದ್ರು. ಈಗ ಶೋಭಾ ಜೀ ಆಪ್ ಕಂಹಾ ಹೈ(ಎಲ್ಲಿದ್ದೀರಾ ನೀವು?) ಎಂದು ಹಾಸ್ಯ ಮಾಡಿದರು.
ಮೋದಿ ಅವರು ಒಳ್ಳೆ ದಿನ ಬರುತ್ತೆ ಅಂದರು. ಎಲ್ಲಿ ಮೋದಿ ಜೀ ಒಳ್ಳೆ ದಿನ. ಬಿಜೆಪಿ ಜನ ಸ್ವರಾಜ್ ಎಂದು ಶಂಖ, ಕೊಂಬು ಊದಿಕೊಂಡು ಹೊರಟಿದ್ದಾರೆ. ಶಂಖಕ್ಕೆ ಕೊಂಬುಗೆ ಮರ್ಯಾದೆ ಇದೆ. ಅದರ ಮರ್ಯಾದೆ ತೆಗೆಯಲು ಇವರು ಹೊರಟಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟವರು. ಗ್ರಾಮ ಸ್ವರಾಜ್ ಯಾತ್ರೆ ಮಾಡಲು ಹೊರಟಿದ್ದಾರೆ. ಅಧಿಕಾರ ವಿಕೇಂದ್ರೀಕರಣಕ್ಕೆ ವಿರೋಧ ಬಿಜೆಪಿ ಅಂಥವರು ಗ್ರಾಮ ಸ್ವರಾಜ್ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಚಿವ ಈಶ್ವರಪ್ಪ ಒಬ್ಬ ಪೆದ್ದ. ಜನರಿಗೆ ನೀವು ಮತ ಕೊಟ್ಟರೆ ನಾವು ಗ್ಯಾರಂಟಿ ಕೊಡ್ತೀವಿ ಅಂದಿದ್ದಾರೆ. ಜನರ ದುಡ್ಡು ಜನರಿಗೆ ಕೊಡಲು ಈ ರೀತಿ ಹೇಳುತ್ತಾರೆ. ಕಳೆದ ಬಾರಿ ಪರಿಷತ್ ನಲ್ಲಿ ತುಮಕೂರಿನಲ್ಲಿ ಸೋತಿದ್ದಿವಿ. ಆದರೆ ಈ ಬಾರಿ ಗೆಲ್ತೀವಿ, ಆರ್. ರಾಜೇಂದ್ರ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ನೂರಕ್ಕೆ ನೂರು ಈ ಬಾರಿ ರಾಜೇಂದ್ರ ಗೆಲ್ಲುತ್ತಾರೆ. ಮಳೆಯಿಂದಾಗಿ 1 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆ ಸಿಎಂ ಬೊಮ್ಮಾಯಿ ಚಲನಚಿತ್ರ ಬಿಡುಗಡೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಬೊಮ್ಮಾಯಿ ಅವರಿಗೆ ರೈತರ ಬಗ್ಗೆ ಕನಿಕರ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ನಡುಗಡ್ಡೆಯಲ್ಲಿ ಸಿಲುಕಿದ 500 ದನಕರುಗಳು – ಹಸುಗಳನ್ನು ಕಾಪಾಡುವಂತೆ ಡಿಸಿಗೆ ಮನವಿ
5 ಟ್ರಿಲಿಯನ್ ಆದಾಯ ಮಾಡ್ತೀನಿ ಅಂದರು. ಇನ್ನೂ ಮೋದಿ ಅವರ ಹೆಸರಲ್ಲಿ ಬದುಕುತ್ತಿದ್ದಾರೆ. ಬಿಜೆಪಿಗೆ ಅವರಿಗೆ ಧಮ್ ಇಲ್ಲ. ಹಾಗಾಗಿ ಮೋದಿ ಅವರ ಹೆಸರಲ್ಲೇ ಬದುಕುತಿದ್ದಾರೆ. ಕಾಂಗ್ರೆಸ್ ಸರ್ಕಾರ 10 ಪರ್ಸೆಂಟ್ ಸರ್ಕಾರ ಎಂದು ಮೋದಿ ಹೇಳಿದ್ರು. ಈಗ ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಮೋದಿ ಅವರಿಗೆ ಪತ್ರ ಬರೆದು ರಾಜ್ಯ ಸರ್ಕಾರದ ಶೇಕಡಾವಾರು ತಿಳಿಸಿದ್ದಾರೆ. ಬೊಮ್ಮಾಯಿ ನಿಮಗೆ ಮಾನ ಮರ್ಯಾದೆ ಇದ್ರೆ, ಶೇ.30-40 ಲಂಚ ಪಡೀತಿದ್ದಾರೆ. ಇಂಥಹ ಸರ್ಕಾರ ಕಿತ್ತೊಗೆಯಬೇಕು. ಭ್ರಷ್ಟಾಚಾರ, ಕಪಟತನ ಬಯಲಿಗೆ ತಂದು ಅವರನ್ನು ಬೆತ್ತಲೆ ಮಾಡುವ ಕೆಲಸ ಮಾಡುತ್ತೇವೆ. ರೈತರಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.