ಪುನೀತ್‌ ಅಭಿಮಾನಿಗಳಿಗೆ ಅಶ್ವಿನಿ ಭಾವನಾತ್ಮಕ ಪತ್ರ

Public TV
1 Min Read
ashwini puneethrajukmar

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ನಂತರ ಅವರ ಬಗ್ಗೆ ಕುಟುಂಬಸ್ಥರು, ಗಣ್ಯರು, ಅಭಿಮಾನಿಗಳು ಭಾವನಾತ್ಮಕವಾದ ಮಾತುಗಳನ್ನಾಡಿದ್ದರು. ಪುನೀತ್‌ ಅವರ ನಿಧನಕ್ಕೆ ರಾಜ್ಯ, ದೇಶ, ವಿದೇಶಗಳಲ್ಲಿ ವ್ಯಕ್ತವಾದ ಶೋಕ ಹಾಗೂ ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲೂ ಅಳವಡಿಸಿಕೊಂಡ ರೀತಿಯನ್ನು ಕಂಡು ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಭಾವುಕರಾಗಿದ್ದಾರೆ. ಅಭಿಮಾನಿಗಳು ತೋರಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸಿ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.

Puneeth Rajkumar 6

ಅಶ್ವಿನಿ ಪತ್ರದ ಸಾರಾಂಶ ಹೀಗಿದೆ…
ಶ್ರೀ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ʼಪವರ್‌ ಸ್ಟಾರ್‌ʼ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ, ಅಹಿತಕರ ಘಟನೆಗಳು ನಡೆಯಲು ಬಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು..

ashwini letter

ಹೀಗೆ, ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಅವರು ಭಾವುಕವಾಗಿ ಪತ್ರ ಬರೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *