ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ, ಪುರಾಣಪ್ರಸಿದ್ಧ ಮೇಲುಕೋಟೆಯಲ್ಲಿ ಮತ್ತೆ ಸಿನಿಮಾ ತಂಡ ಅವಾಂತರ ಸೃಷ್ಟಿಸಿದ್ದು, ತಮಿಳು ಚಿತ್ರತಂಡದ ಎಡವಟ್ಟಿನ ಬಳಿಕ ಇದೀಗ ತೆಲುಗು ಸಿನಿಮಾ ತಂಡದ ಅವಾಂತರ ಸೃಷ್ಟಿ ಮಾಡಿದೆ.
ಮೇಲುಕೋಟೆಯಲ್ಲಿ ನಾಗಚೇತನ್ ನಟನೆಯ ತೆಲುಗಿನ ‘ಬಂಗಾರರಾಜು 2’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಎಡವಟ್ಟೊಂದು ನಡೆದಿದೆ. ನಿನ್ನೆಯಿಂದ ಮೇಲುಕೋಟೆಯಲ್ಲಿ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ. ಮೇಲುಕೋಟೆಯ ಐತಿಹಾಸಿಕ ಕಲ್ಯಾಣಿ ಬಳಿ ಈ ತಂಡ ಶೂಟಿಂಗ್ ನಡೆಸುತ್ತಿದೆ. ಇಲ್ಲಿಗೆ ಕ್ರೇನ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲದಿದ್ದರೂ ಸಹ, ಕ್ರೇನ್ ತೆಗೆದುಕೊಂಡು ಶೂಟಿಂಗ್ ನಡೆಸಿದೆ. ಮಳೆಯಿಂದಾಗಿ ಮಣ್ಣು ತೇವವಾಗಿದ್ದ ಕಾರಣ ಮಣ್ಣಿನಲ್ಲಿ ಕ್ರೇನ್ ಸಿಲುಕಿಕೊಂಡಿದ್ದು, ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಖಾನ್ ಸಿನಿಮಾಗಳನ್ನು ಮೀರಿಸಿ ಗೆಲುವಿನ ನಗೆ ಬೀರಿದ ಅಕ್ಷಯ್ ಕುಮಾರ್
ಕ್ರೇನ್ ಮೇಲೆ ಎತ್ತಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಮೇಲೆ ಎತ್ತಬೇಕು ಎಂದರೆ ಜೆಸಿಬಿಯನ್ನು ಬಳಸಬೇಕಿದೆ. ಒಂದು ವೇಳೆ ಜೆಸಿಬಿ ಬಳಕೆ ಮಾಡಿದರೆ ಕಲ್ಯಾಣಿ ಬಳಿ ಇರುವ ಕಲ್ಲಿನ ಚಪ್ಪಡಿಗಳು ಮೇಲೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ಕಲ್ಯಾಣಿಯನ್ನು ಡಾ.ಸುಧಾಮೂರ್ತಿ ಅವರು ಜೀರ್ಣೋದ್ಧಾರ ಮಾಡಿಸಿದ್ದರು. ಹೀಗಿರುವಾಗ ಸಿನಿಮಾ ಶೂಟಿಂಗ್ ವೇಳೆ ಇದನ್ನು ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
ಹೀಗಾಗಲೇ ಮೇಲುಕೋಟೆಯ ತಂಗಿಕೊಳದ ನೀರನ್ನು ತಮಿಳು ಸಿನಿಮಾ ತಂಡವೊಂದು ಕಲುಷಿತಗೊಳಿಸಿದೆ. ಶೂಟಿಂಗ್ ವೇಳೆ ತಂಗಿಕೊಳಕ್ಕೆ ಬಣ್ಣ ಹಾಗೂ ಹೂ ಹಾಕಿದ ಕಾರಣ ತಂಗಿಕೊಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿತ್ತು. ತಮಿಳು ಚಿತ್ರತಂಡದ ಎಡವಟ್ಟಿನಿಂದಾಗಿ ಚೆಲುವನಾರಾಯಣಸ್ವಾಮಿ ಅಭಿಷೇಕಕ್ಕೆ ಬಳಸುತ್ತಿದ್ದ ಕಲ್ಯಾಣಿ ನೀರು ಕಲುಷಿತಗೊಂಡಿದ್ದು, ಭಕ್ತರಿಗೆ ಇದೇ ನೀರನ್ನು ತೀರ್ಥದ ರೂಪದಲ್ಲಿ ನೀಡಲಾಗುತ್ತಿತ್ತು. ಈಗ ಕಲುಷಿತವಾಗಿರುವ ಕಾರಣ ತೀರ್ಥದ ರೂಪದಲ್ಲಿ ಈ ನೀರನ್ನು ಕೊಡಲಾಗುತ್ತಿಲ್ಲ. ಇದನ್ನೂ ಓದಿ: ಮಗಳ ಹುಟ್ಟುಹಬ್ಬವನ್ನು ವಿಲ್ಲಾದಲ್ಲಿ ಆಚರಿಸುತ್ತಿರೋ ಅಭಿ, ಐಶ್ – ದಿನಕ್ಕೆ ಇದರ ಬೆಲೆ ಎಷ್ಟು ಗೊತ್ತಾ?
ತಮಿಳು ಸಿನಿಮಾ ತಂಡದ ಬಳಿಕ ಇದೀಗ ತೆಲುಗು ಸಿನಿಮಾ ತಂಡದಿಂದ ಇನ್ನೊಂದು ಅವಘಡ ಸೃಷ್ಟಿಯಾಗಿದೆ. ಮೇಲುಕೋಟೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಪದೇ ಪದೇ ಸಿನಿಮಾ ತಂಡಗಳು ನಿಯಮವನ್ನು ಉಲ್ಲಂಘಿಸುತ್ತಿವೆ.