ಚಿಕ್ಕಮಗಳೂರು: ಬೈಕ್‍ನಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಯಾತ್ರಾರ್ಥಿ ಮೇಲೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಮೃತರನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಮಾಲೂರು ಮೂಲದ ಜೀವನ್ (21) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಕುಖ್ಯಾತ ಹ್ಯಾಕರ್ ಶ್ರೀಕಿ ಬಂಧನ
ಜೀವನ್ ತನ್ನ ಸ್ನೇಹಿತರ ಜೊತೆ ರಾಮನಗರದಿಂದ ಧರ್ಮಸ್ಥಳಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕಳೆದ ಹದಿನೈದು ದಿನದಿಂದ ಸಂಜೆ ವೇಳೆ ಭಾರೀ ಮಳೆ ಸುರಿಯುತ್ತಿದೆ. ಇಡೀ ರಾತ್ರಿ ಧಾರಾಕಾರವಾಗಿ ಸುರಿಯುವ ಮಳೆ ಹಗಲಲ್ಲಿ ಬಿಡುವು ನೀಡುತ್ತಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿಘಾಟ್ ಭಾಗದಲ್ಲಿ ಯತೇಚ್ಛವಾಗಿ ಮಳೆ ಸುರಿಯುತ್ತಿದ್ದು ಮಳೆಯಲ್ಲೇ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಧರ್ಮಸ್ಥಳಕ್ಕೆ ಹೋಗುತ್ತಿದ್ದಾಗ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಬೈಕ್ ಮೇಲೆ ಮರ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!
ಮರ ಬಿದ್ದ ಗಾಯಗೊಂಡಿದ್ದ ಆತನನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಇದೇ ವೇಳೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.