– ಚಾಲಕನ ಮೊಬೈಲ್ ಸ್ವಿಚ್ ಆಫ್
– ಕೋಲಾರದ ಹೈವೇಯಲ್ಲಿ ಹೆಚ್ಚಾಯ್ತು ರಾಬರಿ
ಕೋಲಾರ: ಏಳು ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ರಾಬರಿ ಪ್ರಕರಣ ಬೇಧಿಸುವ ಮೊದಲೇ ಈಗ ಅಮೆಜಾನ್ ಸೇರಿದ ಕಂಟೇನರ್ ಟ್ರಕ್‌ನಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಳೆದ ಆಗಸ್ಟ್ 6 ರಂದು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದ ಎಂಐ ಕಂಪನಿಗೆ ಸೇರಿದ್ದ ಸುಮಾರು 7.3 ಕೋಟಿ ರೂ. ಮೌಲ್ಯದ ಮೊಬೈಲ್‌ಗಳನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ನಡೆದು ಎರಡು ತಿಂಗಳು ಕಳೆಯುವ ಮುನ್ನವೇ ಮತ್ತೊಂದು ದೊಡ್ಡ ಮಟ್ಟದ ರಾಬರಿ ನಡೆದಿದೆ.
ಹೌದು ಅಮೆಜಾನ್ ಕಂಪನಿಗೆ ಸೇರಿದ ವಸ್ತುಗಳನ್ನು ಸಾಗಿಸುತ್ತಿದ್ದ ನಿಕೋ ಲಾಜಿಸ್ಟಿಕ್ ಕಂಪನಿಯ ಕಂಟೇನರ್‌ನಲ್ಲಿ ಕಳ್ಳತನ ನಡೆದಿದೆ. ದೇವನಹಳ್ಳಿ ವಿಮಾನ ನಿಲ್ದಾಣದಿಂದ ಅನುಗೊಂಡಹಳ್ಳಿ ಬಳಿಯ ಗೋಡೌನ್‌ಗೆ ಸುಮಾರು 1.64 ಕೋಟಿ ರೂಪಾಯಿಯ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ವಸ್ತುಗಳು ಕಳ್ಳತನವಾಗಿದೆ. ಜಿಪಿಎಸ್ ಆಧಾರದಲ್ಲಿ ಪತ್ತೆ ಹಚ್ಚಿದ ನಿಕೋ ಲಾಜಿಸ್ಟಿಕ್ ಕಂಪನಿಯವರು ಪತ್ತೆ ಮಾಡಿದಾಗ ಹೊಸಕೋಟೆ ಬಳಿ ಜಿಪಿಎಸ್ ಡಿವೈಸ್‌ನ್ನು ಕಿತ್ತು ಬಿಸಾಡಿ, ಲಾರಿಯನ್ನು ಕೋಲಾರ ತಾಲ್ಲೂಕು ಚುಂಚದೇನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿದೆ. ಇದನ್ನೂ ಓದಿ: ಸಂಪತ್ತು ಭಾರೀ ಏರಿಕೆ – ಪಾಕಿಸ್ತಾನದ GDP ಮೀರಿಸಿದ ಎಲೋನ್ ಮಸ್ಕ್
ಶನಿವಾರ ರಾತ್ರಿ ವೇಳೆಗೆ ಲಾರಿ ಪತ್ತೆಯಾಗಿದ್ದು ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಷ್ಟಕ್ಕೂ ನಿಕೋ ಲಾಜಿಸ್ಟಿಕ್ ಕಂಪನಿಗೆ ಸೇರಿದ ಲಾರಿಯಲ್ಲಿ ಪ್ರತಿನಿತ್ಯ ದೇವನಹಳ್ಳಿ ಏರ್‌ಪೋರ್ಟ್‌ನಿಂದ ಅನುಗೊಂಡನಹಳ್ಳಿ ಅಮೆಜಾನ್ ಕಂಪನಿಯ ವಸ್ತುಗಳನ್ನು ಸಾಗಿಸಲಾಗುತ್ತಿತ್ತು.
ಮುರುಡೇಶ್ವರ ಮೂಲದ ಮಂಜುನಾಥ್ ಈ ಲಾರಿಯನ್ನು ಚಲಾಯಿಸುತ್ತಿದ್ದರು. ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳ ಕಾಲ ರಜೆ ಪಡೆದು ಬೇರೊಬ್ಬ ಅಸ್ಸಾಂ ಮೂಲದ ಚಾಲಕ ಅಜಯ್ ಮೋರಾ ಎಂಬಾತನನ್ನು ತನ್ನ ಬದಲಿಗೆ ಕಳುಸಿದ್ದರು. ನಾಲ್ಕು ದಿನಗಳ ಕಾಲ ಸರಿಯಾಗಿಯೇ ವಸ್ತುಗಳನ್ನು ತಲುಪಿಸಿದ್ದ ಅಜಯ್ ಮೋರಾ ನಿನ್ನೆ ಕೊನೆಯ ದಿನ ಬೆಳಗಿನ ಜಾವದ ಹೊತ್ತಿಗೆ ಲೋಡ್ ತೆಗೆದುಕೊಂಡು ಹೊರಟಿದ್ದ. ಹೊರಟವನು ಹೊಸಕೋಟೆ ನಂತರ ದಾರಿ ಬದಲಿಸಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಕಂಪನಿಯವರು ಆತನ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್
ಡ್ರೈವರ್ ಅಜಯ್ ಮೋರಾ ಮೊಬೈಲ್ ಸ್ವಿಚ್ ಆಫ್ ಮಾಡಿ ಡಿವೈಸ್‌ನ್ನು ಹೊಸಕೋಟೆ ಬಳಿಯ ವೋಲ್ವೋ ಕಂಪನಿ ಬಳಿ ಎಸೆದು ಹೋಗಿದ್ದಾನೆ. ಸದ್ಯ ಹೊಸ ಡ್ರೈವರ್ ಅಜಯ್ ಮೋರಾ ಪ್ಲಾನ್ ಮಾಡಿ ಈ ಕೆಲಸ ಮಾಡಿರುವ ಬಗ್ಗೆ ಅನುಮಾನವಿದ್ದು, ವಾಹನದಲ್ಲಿ 1.64 ಕೋಟಿ ರೂ. ಮೌಲ್ಯದ ವಸ್ತುಗಳ ಪೈಕಿ ಎಷ್ಟು ಕಳುವಾಗಿದೆ ಎಷ್ಟು ವಾಹನದಲ್ಲಿ ಇದೆ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.