ಹೈದರಾಬಾದ್: ದೊಡ್ಮನೆ ಹುಡುಗ ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಬಹುಬಾಷಾ ನಟಿ ರೋಜಾ ಅವರು ಕಂಬನಿ ಮಿಡಿದಿದ್ದಾರೆ.
ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಕೇಳಿ ಬಹಳ ಬೇಸರವಾಯಿತು. ತೆಲುಗಿನ ಅಮ್ಮ ನಾನಾ ಓ ತಮಿಳ ಅಮ್ಮಾಯಿ ಸಿನಿಮಾದ ಕನ್ನಡ ರಿಮೇಕ್ ಮೌರ್ಯದಲ್ಲಿ ನನ್ನ ಮಗನ ಪಾತ್ರದಲ್ಲಿ ಅಭಿನಯಿಸಿದ್ದರು. ಪುನೀತ್ ಎಷ್ಟು ಉತ್ತಮ ವ್ಯಕ್ತಿ ಎಂದರೆ ಅವರ ತಂದೆ ಅಷ್ಟು ದೊಡ್ಡ ಸ್ಟಾರ್ ನಟರಾಗಿದ್ದರೂ ಯಾವುದೇ ಅಹಂ ಇಲ್ಲದೇ ಎಲ್ಲರೊಂದಿಗೆ ಬಹಳ ಫ್ರೆಂಡ್ಲಿಯಾಗಿದ್ದರು. ಅವರ ಸಹೋದರರಿಗೂ ನಾನು ನಟಿಯಾಗಿ ಅಭಿನಯಿಸಿದ್ದೆ. ಪುನೀತ್ ಮತ್ತು ಅವರ ಕುಟುಂಬದವರೆಲ್ಲರೂ ಕೂಡ ಎಲ್ಲರನ್ನು ಅವರ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ.
ವ್ಯಾಯಾಮ ಮಾಡಿ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದವರು ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ ಕೂಡಲೇ ನನಗೆ ಏನು ಮಾತನಾಡಬೇಕು ಎಂಬುವುದೇ ತಿಳಿಯಲಿಲ್ಲ. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಅಲ್ಲ. ಇಡೀ ದಕ್ಷಿಣ ಭಾರತದ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇದು ಎಲ್ಲರೂ ಬೇಸರಪಡುವಂತಹ ವಿಚಾರ ಏಕೆಂದರೆ ಪುನೀತ್ ಕನ್ನಡದ ಕಲಾವಿದರಷ್ಟೇ ಅಲ್ಲದೇ ಪರಭಾಷಾ ಕಲಾವಿದರೊಂದಿಗೆ ಕೂಡ ಬಹಳ ಚೆನ್ನಾಗಿ ನಡೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ನನಗಿಂತ ಎರಡು ವರ್ಷ ಚಿಕ್ಕವರಾಗಿದ್ದರೂ ನಾನು ನಿಮ್ಮ ಫ್ಯಾನ್ ಎಂದು ಮಮ್ಮಿ, ಮಮ್ಮಿ ಎಂದು ನನ್ನ ಹಿಂದೆ ಸುತ್ತುತ್ತಿದ್ದರು. ಆದರೆ ಇಂದು ಅವರಿಲ್ಲ. ನನಗೆ ಅವರ ಬಗ್ಗೆ ಮಾತನಾಡಲು ಆಗುತ್ತಿಲ್ಲ. ಕಣ್ಣಿನಲ್ಲಿ ನೀರು ಬರುತ್ತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಪತ್ನಿ ಮತ್ತು ಮಕ್ಕಳಿಗೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಇದನ್ನು ತಡೆದುಕೊಳ್ಳಲು ನಮಗೆ ಇಷ್ಟು ಕಷ್ಟವಾಗುತ್ತಿದೆ ಎಂದರೆ ಅವರ ಹೆಂಡತಿ, ಮಕ್ಕಳು ಮತ್ತು ಕುಟುಂಬಕ್ಕೆ ಎಷ್ಟು ಕಷ್ಟ ಆಗುತ್ತಿರಬಹುದು ಎಂಬುವುದು ನನಗೆ ಅರ್ಥವಾಗುತ್ತದೆ ಎಂದು ಬೇಸರ ವ್ಯಕಪಡಿಸಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ
ದೇವರು ಏಕೆ ಈ ರೀತಿ ಮಾಡುತ್ತಾನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಂದು ಅವರು ಸಾಕಷ್ಟು ಅನಾಥಶ್ರಮ, ವೃದ್ದಾಶ್ರಮ, ಗೋ ಶಾಲೆಗಳಿಗೆ, ಸಾವಿರಾರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದರೆ ಅದು ಸಾಧಾರಣ ವಿಷಯವಲ್ಲ. ಅವರಿಂದ ಎಷ್ಟೋ ಜನ ಜೀವನ ನಡೆಸುತ್ತಿದ್ದರೆ. ಆದರೆ ಇಂದು ಆ ಕುಟುಂಬದಲ್ಲಿಯೇ ಒಬ್ಬರು ಇಲ್ಲದೇ ಇರುವುದು ಭಗವಂತ ನಿಜವಾಗಿಯೂ ಕ್ರೂರಿ ಎನಿಸುತ್ತದೆ. ಇಷ್ಟು ಒಳ್ಳೆಯ ವ್ಯಕ್ತಿಗೆ ದೇವರು ಯಾಕೆ ಈ ರೀತಿ ಮಾಡುತ್ತಾನೆ ಎಂಬುವುದೇ ಎಲ್ಲರಿಗೂ ದೊಡ್ಡ ಪ್ರಶ್ನೆಯಾಗಿದೆ. ಆದರೆ ನಾವು ಮನುಷ್ಯರು ವಿಧಿಯ ನಿಯಮವನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಎಲ್ಲರೂ ಆ ಕುಟುಂಬಕ್ಕಾಗಿ ಪ್ರಾರ್ಥಿಸೋಣ, ಪುನೀತ್ ನಡೆಸುತ್ತಿದ್ದ ಕಾರ್ಯಕ್ರಮಗಳು ಮುಂದಕ್ಕೂ ಹೀಗೆ ಸಾಗಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ