ಶಿವಮೊಗ್ಗ: ಶಾಲೆಗಳು ವಿಳಂಬವಾಗಿ ಆರಂಭವಾಗಿದ್ದರೂ, ಪಠ್ಯ ಕಡಿತಗೊಳಿಸುವ ಬಗ್ಗೆ ಇದುವರೆಗೆ ಯಾವುದೇ ಯೋಚನೆ ಮಾಡಿಲ್ಲ. ಅವಶ್ಯಕತೆ ಬಿದ್ದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಚನೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಪಠ್ಯ ಕಡಿತಗೊಳಿಸುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಮಕ್ಕಳಿಗೆ ಅನ್ಯಾಯವಾಗಿದೆ. ಈಗಾಗಿ ಇರುವ ಪಠ್ಯ ಮುಗಿಸಿದರೆ ಮಕ್ಕಳು ಸಹ ಮುಂದಿನ ತರಗತಿಗೆ ತಯಾರಾಗುತ್ತಾರೆ ಎಂಬ ಯೋಚನೆ ಇದೆ. ಡಿಸೆಂಬರ್ ನಲ್ಲಿ ಒಮ್ಮೆ ಶಿಕ್ಷಣ ತಜ್ಞರು, ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಸಭೆಯಲ್ಲಿ ಚರ್ಚಿಸಿದ ನಂತರ ಅವಶ್ಯಕತೆ ಬಿದ್ದರೆ ಪರೀಕ್ಷೆಗೆ ಪಠ್ಯ ಕಡಿಮೆ ಮಾಡುತ್ತೇವೆ. ಆದರೆ ಪಾಠ ಮಾಡುವುದರಲ್ಲಿ ಸಿಲೆಬಸ್ ಕಡಿತಗೊಳಿಸುವುದಿಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ಬೆಳೆದಿರೋದು ನಾವು – ಕಣ್ಣೀರು ಹಾಕಿದ ಹೆಚ್‍ಡಿಕೆ
ಕೊರೊನಾ ಭೀತಿಯಿಂದ ಕಳೆದ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಿದ್ದವು. ಇಂದಿನಿಂದ 1 ರಿಂದ 5ನೇ ತರಗತಿಯವರೆಗೆ ಶಾಲೆಗಳು ಆರಂಭವಾಗಿದ್ದು, ಇದೀಗ ಸಂಪೂರ್ಣ ಶಾಲೆಗಳು ಆರಂಭವಾದಂತೆ ಆಗಿದೆ. ಮಕ್ಕಳು ಸಹ ಸಂತಸದಿಂದ ಶಾಲೆಗೆ ಆಗಮಿಸಿರುವುದು ಸಂತೋಷ ತರಿಸಿದೆ ಎಂದಿದ್ದಾರೆ.