ಕೋಲಾರ: ವಿಜಯದಶಮಿ ಅಂಗವಾಗಿ ಆಯುಧಗಳಿಗೆ ಪೂಜೆ ಸಲ್ಲಿಸಿದ ಬಳಿಕ ನಾಡ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮಾಲೂರು ಶಾಸಕ ಕೆ.ವೈ ನಂಜೇಗೌಡ ವಿವಾದಕ್ಕೆ ಕಾರಣರಾಗಿದ್ದಾರೆ.
ನಂಜೇಗೌಡ ಸ್ವಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕೊಮ್ಮನಹಳ್ಳಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಡ ಬಂದೂಕಿನಿಂದ ಗಾಳಿಯಲ್ಲಿ 4 ಸುತ್ತು ಗುಂಡು ಹಾರಿಸಿ ಗ್ರಾಮಸ್ಥರೊಂದಿಗೆ ಹಬ್ಬ ಆಚರಣೆ ಮಾಡಿದ್ದರು. ಮೊದಲು ಬನ್ನಿಮರ, ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ ಶಾಸಕರ ಕುಟುಂಬ, ನಂತರ ಪೂಜೆಗೆ ಇಡಲಾಗಿದ್ದ ನಾಡ ಬಂದೂಕಿನಿಂದ ನಂಜೇಗೌಡರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪ್ರತೀ ವರ್ಷದ ಸಂಪ್ರದಾಯದಂತೆ ಗ್ರಾಮದಲ್ಲಿ ದಸರಾ ಆಚರಣೆ ಮಾಡುವಂತೆ ನಂಜೇಗೌಡ, ಪೂಜೆ ಮಾಡಿ ಬಂದೂಕಿನಿಂದ ಗುಂಡು ಹಾರಿಸಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇದನ್ನೂ ಓದಿ: ದುರ್ಗಾದೇವಿ ಮೆರವಣಿಗೆ ವೇಳೆ ಹರಿದ ಕಾರು 1 ಸಾವು 20 ಜನರಿಗೆ ಗಾಯ
ಘಟನೆ ಸಂಬಂಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಲೈಸನ್ಸ್ ಪಡೆದವರು ಮಾತ್ರ ಉಪಯೋಗಿಸ ಬೇಕಿರುವ ಬಂದೂಕನ್ನು ಶಾಸಕರು ಉಪಯೋಗಿಸಿದ್ದು ಮತ್ತು ಸಾರ್ವಜನಿಕ ಸ್ಥಳದಲ್ಲಿ ಗುಂಡು ಹಾರಿಸಿದ್ದು ಅಪರಾಧ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಶಾಸಕ ನಂಜೇಗೌಡ ತಮ್ಮ ಈರೇಗೌಡ ಹೆಸರಿನಲ್ಲಿ ಬಂದೂಕಿನ ಪರವಾನಿಗೆ ಇದೆ ಎಂದು ವರದಿಯಾಗಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಪಾಲಾರ್ ಜಲಾಶಯ ಭರ್ತಿ- ಬರದ ನಾಡು ಕೋಲಾರದಲ್ಲಿ ಭಾರೀ ಮಳೆ