– ಮೋದಿ ಅವರು ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ
– ದಸರಾವನ್ನು ಪ್ಯಾಕೇಜ್ ಟೂರಿಸಂಗೆ ಸಿದ್ಧಪಡಿಸಬೇಕೆಂದು ಮನವಿ
ಮೈಸೂರು: ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಇಂದು ನನಗೆ ಇಂತಹ ಒಂದು ದೊಡ್ಡ ಗೌರವ ಸಿಕ್ಕಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹೇಳಿದರು.
ಇಂದು ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಮನುಕುಲಕ್ಕೆ ಬಂದ ಗಂಡಾಂತರ ಕೊರೊನಾ ದೂರವಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಯಾವ ಜನ್ಮದ ಪುಣ್ಯವೋ ಇಂತಹ ದೊಡ್ಡ ಗೌರವ ಸಿಕ್ಕಿದೆ. ಇಂತಹ ಅವಕಾಶ ಕೊಟ್ಟ ಸಿಎಂಗೆ ಧನ್ಯವಾದಗಳು ಎಂದು ಹೇಳಿದರು.
ಮೈಸೂರಿನ ಒಂಟಿಕೊಪ್ಪಲ್ ನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ನಾನು ಓದಿದ್ದೇನೆ. ಯುವರಾಜ, ಮಹಾರಾಜ ಕಾಲೇಜಿನಲ್ಲಿ ಓದಿದ್ದೇನೆ. ಮೈಸೂರು ಜೊತೆಯಲ್ಲೇ ನಾನು ಬೆಳೆದೆ. ಪ್ರತಿ ದಿನ ಚಾಮುಂಡಿ ದೇವಿಗೆ ಕೈ ಮುಗಿದೆ ಶಾಲಾ – ಕಾಲೇಜಿಗೆ ಹೋಗುತ್ತಿದ್ದೆ. ಮೈಸೂರಿನ ದಿವಾನರನ್ನು ನೆನೆಯುತ್ತಿದ್ದೇನೆ. ರಾಮಕೃಷ್ಣ ಆಶ್ರಮದಿಂದ ಚಾಮುಂಡಿ ಬೆಟ್ಟಕ್ಕೆ ನಡೆದುಕೊಂಡು ಬಂದು ದೇವಿಗೆ ಪೂಜೆ ಸಲ್ಲಿಸುತ್ತಿದ್ದೆ. ವಿದ್ಯಾರ್ಥಿಯಾದಾಗಿನಿಂದ ದಸರಾ ನೋಡುತ್ತಿದ್ದೇನೆ. ಚಿನ್ನದ ಅಂಬಾರಿಗೆ 8 ಶತಮಾನಗಳ ಇತಿಹಾಸವಿದೆ. ದಸರಾ ಆಗಾಗ್ಗೆ ಪರಿವರ್ತನೆ ಆಗುತ್ತಾ ಬಂದಿದೆ ಎಂದು ಸಿಎಂ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಕನ್ನಂಬಾಡಿ ಕಟ್ಟಿದ ಎಲ್ಲಾ ಪುಣ್ಯತ್ಮರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾವು ಸದಾ ಹಿಂದಿನದನ್ನೂ ನೆನೆಯಬೇಕು. ಹಿಂದಿನದನ್ನು ನೆನೆದರೆ ಮುಂದಿನ ಗುರಿ ಸ್ಪಷ್ಟವಾಗುತ್ತಾ ಹೋಗುತ್ತದೆ. ಹಿಂದಿನದನ್ನು ಯಾವತ್ತಿಗೂ ಮರೆಯಬಾರದು. ಮೋದಿ ಅವರು ಬಹಳ ಒಳ್ಳೆಯ ಕೆಲಸ ಮಾಡಿ ದೇಶ ಕಟ್ಟುತ್ತಿದ್ದಾರೆ. ನಾನು ಬಹಳಷ್ಟು ಆಡಳಿತ ನೋಡಿದ್ದೇನೆ. ಮೋದಿ ಅವರು ಬಹಳ ಅಚ್ಚುಕಟ್ಟಾಗಿ ಶ್ರದ್ಧೆಯಿಂದ ದೇಶದ ಕೆಲಸ ಮಾಡುತ್ತಿದ್ದಾರೆ. ತಾಯಿ ಚಾಮುಂಡಿ ದೇವಿ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ
ಮೈಸೂರು ದಸರಾವನ್ನು ಪ್ಯಾಕೇಜ್ ಟೂರಿಸಂಗೆ ಸಿದ್ಧ ಮಾಡಬೇಕು ಎಂದು ಇದೇ ವೇಳೆ ಕೃಷ್ಣ ಅವರು ಸಿಎಂಗೆ ಮನವಿ ಮಾಡಿದರು. ದಸರಾ ಟೂರಿಸಂ ಪ್ಯಾಕೇಜ್ ಮಾಡಿದರೆ ಪ್ರವಾಸೋದ್ಯಮ ಬಹಳ ಉತ್ತಮವಾಗಿ ಬೆಳವಣಿಗೆ ಆಗುತ್ತದೆ. ಸಿಂಗಾಪೂರ್ ನಲ್ಲಿ ಟೂರಿಸಂಗೆ ಹೇಗೆ ಹೆಚ್ಚು ಒತ್ತು ಕೊಟ್ಟಿದ್ದಾರೋ ಹಾಗೆಯೇ ಮೈಸೂರು ಟೂರಿಸಂ ಬೆಳೆಸಬೇಕು. ಮೈಸೂರು ದಸರಾದಲ್ಲಿ ಕುಸ್ತಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಒತ್ತಾಯಿಸಿದರು.