ಚಿತ್ರದುರ್ಗ: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವ ಮಾತೇ ಇಲ್ಲ. ಅಲ್ಲದೆ ಇತ್ತ ಭಾರತೀಯ ಜನತಾ ಪಕ್ಷ(ಬಿಜೆಪಿ)ಯನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್‍ಗೆ ಸೇರಲಿದ್ದಾರೆಂಬ ವಿಚಾರದ ಕುರಿತು ಶಾಸಕರು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಎಲ್ಲಾ ವದಂತಿಗಳು ಸತ್ಯಕ್ಕೆ ದೂರವಾದದ್ದು. ನಾನು ಕಾಂಗ್ರೆಸ್ ಸೇರಲ್ಲ. ಬಿಜೆಪಿ ಬಿಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ
ನನ್ನ ರಾಜಕೀಯ ವಿರೋಧಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸುಳ್ಳುಸುದ್ದಿ ಹಬ್ಬಿಸಿ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ ಎನ್ನುವುದು ಕೂಡ ಸುಳ್ಳು. ಇಂತಹ ಅಪಪ್ರಚಾರದಿಂದ ಕ್ಷೇತ್ರದ ಜನರ ಎದುರು, ಸರ್ಕಾರದ ಮಟ್ಟದಲ್ಲಿ ಮುಜುಗರವಾಗುತ್ತಿದೆ. ವಿರೋಧಿಗಳು ಹಬ್ಬಿಸುವ ಇಂಥ ಆಧಾರರಹಿತ ಸುದ್ದಿಗಳನ್ನು ದಯಮಾಡಿ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?
2023ರ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ಗೇಮ್ ಪ್ಲಾನ್ ಶುರು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ದಿಲ್ಲದೇ ಆಪರೇಷನ್ ಹಸ್ತ ಜಾರಿಯಲ್ಲಿದೆ. ಜೆಡಿಎಸ್, ಬಿಜೆಪಿ ಶಾಸಕರನ್ನು ಕಾಂಗ್ರೆಸ್ಸಿಗೆ ಸೆಳೆಯಲು ಕೈ ತಂತ್ರಗಾರಿಕೆ ಹೂಡಿದೆ ಎನ್ನಲಾಗುತ್ತಿದೆ. ಇತ್ತ ಆಪರೇಷನ್ ಕಾಂಗ್ರೆಸ್ ಬೆನ್ನಲ್ಲೇ ಯಡಿಯೂರಪ್ಪ ಅಲರ್ಟ್ ಆಗಿದ್ದಾರೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮನ್ನು ಕಡೆಗಣಿಸಿದರೆ ಬಿಜೆಪಿಗೆ ದೊಡ್ಡ ನಷ್ಟ. ತಮ್ಮ ವಿಚಾರದಲ್ಲಿ ಹೈಕಮಾಂಡ್‍ನ ನಡೆ, ಧೋರಣೆಗಳು ಸಕಾಲಿಕ ಅಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದನ್ನೂ ಓದಿ: ಕಾಂಗ್ರೆಸ್ ಆಪರೇಷನ್ ಬಗ್ಗೆ ಯಡಿಯೂರಪ್ಪ ವಾರ್ನಿಂಗ್