ದೇಶದಲ್ಲಿ ನೀಡಿದ ಲಸಿಕೆಗಳ ಪೈಕಿ ಶೇ.11 ರಷ್ಟು ಪಾಲು ರಾಜ್ಯದ್ದು: ಡಾ.ಕೆ.ಸುಧಾಕರ್

Public TV
3 Min Read
vaccine hyderabad 2

-ಲಸಿಕೆ ನೀಡುವುದರಲ್ಲಿ ಕರ್ನಾಟಕ ನಂ.1
-ರಾಜ್ಯದಲ್ಲಿ 29 ಲಕ್ಷ ಲಸಿಕೆ

ಬೆಂಗಳೂರು: ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ.11 ರಷ್ಟು ರಾಜ್ಯದಲ್ಲಿ ನೀಡಲಾಗಿದೆ. ಈ ಮೂಲಕ ಕರ್ನಾಟಕ ಹೊಸ ಸಾಧನೆ ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

SUDAKAR 2

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 29 ಲಕ್ಷ ಲಸಿಕೆ ನೀಡಿದ್ದು, ಇನ್ನೂ 1.68 ಲಕ್ಷ ದಾಖಲು ಮಾಡಬೇಕಿದೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ಲಸಿಕೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರೋತ್ಸಾಹ ನೀಡಿದರು. ಒಂದು ದಿನದಲ್ಲಿ 30 ಲಕ್ಷ ಲಸಿಕೆ ನೀಡುವ ಗುರಿ ಹಾಕಿಕೊಂಡಿದ್ದು, ಶನಿವಾರ ಬೆಳಗ್ಗೆ 8.30 ಗಂಟೆಗೆ 29,50,093 ಲಸಿಕೆ ನೀಡಿರುವುದು ದಾಖಲಾಗಿದೆ. ಉಳಿದಂತೆ 1.68 ಲಕ್ಷ ಡೋಸ್ ಲಸಿಕೆ ನೀಡಿರುವುದನ್ನು ದಾಖಲು ಮಾಡಬೇಕಿದೆ. ಇದರಿಂದಾಗಿ 31 ಲಕ್ಷ ಲಸಿಕೆ ನೀಡಿದಂತಾಗುತ್ತದೆ. ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ.11 ರಷ್ಟು ರಾಜ್ಯದಲ್ಲಿ ನೀಡಲಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

NARENDRA MODI medium

ಪ್ರತಿ ಅರ್ಹ, ಹತ್ತು ಲಕ್ಷ ಜನಸಂಖ್ಯೆಗೆ ಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪೈಕಿ ಕರ್ನಾಟಕವು 62,003 ಲಸಿಕೆ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. 14,401 ಲಸಿಕೆ ಕೇಂದ್ರಗಳನ್ನು ಸಿದ್ಧಪಡಿಸಲಾಗಿದ್ದು, ಒಂದು ಕಡೆ ಸರಾಸರಿ 205 ಲಸಿಕೆ ನೀಡಲಾಗಿದೆ. 14 ಜಿಲ್ಲೆಗಳು ಗುರಿಗಿಂತ ಅಧಿಕ ಸಾಧನೆ ಮಾಡಿವೆ. 4 ಜಿಲ್ಲೆಗಳು ಮಾತ್ರ ಗುರಿಗಿಂತ 75% ನಷ್ಟು ಸಾಧನೆ ಮಾಡಿದೆ. ಇಡೀ ದೇಶದಲ್ಲಿ ಅತೀ ಹೆಚ್ಚು ಲಸಿಕೆಯನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ (4.09 ಲಕ್ಷ) ನೀಡಲಾಗಿದೆ. ಬೆಳಗಾವಿಯಲ್ಲಿ 2.57 ಲಕ್ಷ ಲಸಿಕೆ ನೀಡಲಾಗಿದೆ. ಜಿಲ್ಲಾಮಟ್ಟದ ಸಾಧನೆಯಲ್ಲಿ ಎರಡು ಸ್ಥಾನಗಳು ರಾಜ್ಯಕ್ಕೆ ಬಂದಿವೆ. ರಾಜ್ಯದಲ್ಲಿ ಒಟ್ಟು 14.96 ಲಕ್ಷ ಲಸಿಕೆಗಳನ್ನು ಮಹಿಳೆಯರು ಪಡೆದಿದ್ದು, ಪುರುಷರಿಗಿಂತ (14.53 ಲಕ್ಷ) ಮುಂದೆ ಇದ್ದಾರೆ. ಇವೆಲ್ಲ ಸೇರಿ ಈವರೆಗೆ ಒಟ್ಟು 5 ಕೋಟಿ ಲಸಿಕೆ ನೀಡಿದ್ದು, ಕಳೆದ 20 ದಿನಗಳಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. 1 ಕೋಟಿ ಜನರಿಗೆ ಎರಡೂ ಡೋಸ್ ನೀಡಲಾಗಿದೆ ಎಂಬ ಹೆಗ್ಗಳಿಕೆ ಬಂದಿದೆ. ಕಲಬುರ್ಗಿಯಲ್ಲಿ ಗುರಿಗಿಂತ ಕೇವಲ 41%, ಕೊಪ್ಪಳದಲ್ಲಿ 62%, ಉಡುಪಿಯಲ್ಲಿ 63% ಆಗಿದೆ. ಬೆಂಗಳೂರು ನಗರದಲ್ಲಿ 143%, ಶಿವಮೊಗ್ಗದಲ್ಲಿ 134%, ಧಾರವಾಡ, ಹಾಸನ, ಚಿಕ್ಕಬಳ್ಳಾಪುರ, ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ 120% ಸಾಧನೆ ಮಾಡಿವೆ ಎಂದರು.

Vaccine

ರಕ್ತ ಸಂಗ್ರಹ, ಅಂಗಾಂಗ ದಾನ:
ಇದೇ ದಿನ ರಾಜ್ಯದಲ್ಲಿ ರಕ್ತದಾನ ಶಿಬಿರ ನಡೆದಿದ್ದು, ಒಟ್ಟು 5,201 ಯುನಿಟ್ ರಕ್ತ ಸಂಗ್ರಹವಾಗಿದೆ. ಬಿಬಿಎಂಪಿಯಲ್ಲಿ 1,240 ಯುನಿಟ್, ಬಳ್ಳಾರಿಯಲ್ಲಿ 298, ದಕ್ಷಿಣ ಕನ್ನಡದಲ್ಲಿ 295 ಯುನಿಟ್ ಸಂಗ್ರಹವಾಗಿದೆ. ಎರಡು ವಾರಗಳಲ್ಲಿ ಒಂದು ಲಕ್ಷ ಯುನಿಟ್ ರಕ್ತ ಸಂಗ್ರಹಿಸಬೇಕೆಂಬ ಗುರಿ ಇದ್ದು, ಇದಕ್ಕಾಗಿ ಸೂಚನೆ ನೀಡಲಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1 ಜನರಿಗೆ ರಕ್ತ ಬೇಕಿದೆ ಎಂದರು. ಇದನ್ನೂ ಓದಿ: ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

Koppala Vaccine 2

ಅಂಗಾಂಗ ಕಸಿಗೂ ದಾನ ಹೆಚ್ಚಬೇಕಿದೆ. ಇದಕ್ಕಾಗಿ ಮೆಡಿಕಲ್ ಕಾಲೇಜು, ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ದಾನ ವಿಭಾಗ ಆರಂಭಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿಗಳಿಂದ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಿ ಜಾಗೃತಿ ಮೂಡಿಸಿ ಇಡೀ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಜೊತೆಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಪ್ರತಿ ಕುಟುಂಬಕ್ಕೆ ನೀಡಲು ಮೂರು ತಿಂಗಳ ಗುರಿ ನೀಡಲಾಗುವುದು. ಎರಡೂವರೆ ಕೋಟಿ ಕುಟುಂಬಕ್ಕೆ ನೀಡುವ ಗುರಿ ಇದೆ ಎಂದರು. ಇದನ್ನೂ ಓದಿ: ಲಸಿಕೆ ವಿತರಣೆ- ದೇಶದಲ್ಲಿ ಬೆಂಗಳೂರು ನಂಬರ್ 1

 

ವಿಷನ್ ವರದಿ:
250 ತಜ್ಞರು ಸೇರಿ ರೂಪಿಸಿದ ಆರೋಗ್ಯ ವಲಯದ ವಿಷನ್ ವರದಿಯನ್ನು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಗಳಿಗೆ ನೀಡಿ ಅವರಿಂದ ಚಾಲನೆ ನೀಡಲಾಗುವುದು ಎಂದರು. ಓರ್ವ ವ್ಯಕ್ತಿ ನಿಫಾ ಪರೀಕ್ಷೆ ಮಾಡಿಸಿಕೊಂಡಿದ್ದು, ಅವರನ್ನು ಐಸೋಲೇಟ್ ಮಾಡಲಾಗಿದೆ. ಇನ್ನೂ ವರದಿ ಬಂದಿಲ್ಲ. ಹಿಂದೂ ಧರ್ಮ ರಕ್ಷಣೆ ಬಗ್ಗೆ ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ. ಹಿಂದುತ್ವದ ರಕ್ಷಣೆ ಬಿಜೆಪಿಗೆ ಸ್ವಾಭಾವಿಕವಾಗಿಯೇ ಬಂದಿದೆ. ಈ ವಿಚಾರದಲ್ಲಿ ಅಚಾತುರ್ಯವಾಗಿದ್ದರೆ ಸರಿಪಡಿಸಲಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *