ನನ್ನ ಮಗ ಗೂಂಡಾ ಅಲ್ಲ, ತಪ್ಪು ಸಾಬೀತಾದರೆ ಕ್ರಮ ಕೈಗೊಳ್ಳಲಿ: ಮಾನಪ್ಪ ವಜ್ಜಲ್

Public TV
3 Min Read
raichur manappa vajjal

ರಾಯಚೂರು: ನನ್ನ ಮಗ ಗೂಂಡಾ ಅಲ್ಲ ಚಿಕ್ಕವನು, ಅವನು ತಪ್ಪು ಮಾಡಿದ್ದಾನೆ ಎಂದು ಸಾಬೀತಾದರೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಜಿಲ್ಲೆಯ ಲಿಂಗಸುಗೂರು ಮಾಜಿ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದ್ದಾರೆ.

ಪುತ್ರ ಆಂಜನೇಯ ವಜ್ಜಲ್ ಗಲಾಟೆ ಪ್ರಕರಣ ಈಗ ಸದ್ದು ಮಾಡುತ್ತಿದ್ದು, ಪ್ರಕರಣ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಅಪಾರ್ಟ್‍ಮೆಂಟ್ ಗೆ ಸಂಬಂಧವಿಲ್ಲದ ವ್ಯಕ್ತಿ ಕುಡಿದು ಬಂದು ಗಲಾಟೆ ಮಾಡಿದ್ದಾನೆ. ಎರಡನೇ ಬಾರಿ ಗಲಾಟೆ ಮಾಡಿದ್ದರಿಂದ ನನ್ನ ಪುತ್ರ ಹಾಗೂ ಅಲ್ಲಿದ್ದ ಆತನ ಸ್ನೇಹಿತರು ಮಾತಿನ ಚಕಮಕಿ ನಡೆಸಿದ್ದಾರೆ. ಗಲಾಟೆ ಜೋರಾಗಿದ್ದರಿಂದ ಹಲ್ಲೆಯೂ ಆಗಿದೆ. ರಾಜೀ ಸಂಧಾನ ಮೂಲಕ ಗಲಾಟೆ ಬಗೆಹರಿಸಿಕೊಳ್ಳಬೇಕೆಂದು ಸುಮ್ಮನಾಗಿದ್ದೇವು. ಆದರೆ ಸಣ್ಣ ಘಟನೆ ಈಗ ದೊಡ್ಡದಾಗಿದೆ. ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವೆ. ಪೊಲೀಸರು ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದರು.

ಗಲಾಟೆ ಮಾಡಿದವನು ಯಾರು? ಅವನ ಹಿನ್ನೆಲೆ ಏನು ಎಲ್ಲವನ್ನೂ ತೆಗೆಸುತ್ತೇವೆ. ನಮ್ಮ ಸರ್ಕಾರ ಮಟ್ಟದಲ್ಲಿ ಎಲ್ಲ ಪೊಲೀಸ್ ಠಾಣೆಯಿಂದ ಮಾಹಿತಿ ತರಿಸಿಕೊಳ್ಳುತ್ತೇವೆ. ಅವನ ಕುಟುಂಬದ ಇತಿಹಾಸವನ್ನು ತೆಗೆಸಬೇಕು, ತೆಗೆಸುತ್ತೇವೆ. ನಮ್ಮ ಇತಿಹಾಸವನ್ನು ಸಹ ಅವರು ತೆಗೆದು ನೋಡಲಿ. ನಾನು ಯಾರ ಮೇಲೂ ಪ್ರಭಾವ ಬೀರುವ ಕೆಲಸ ಮಾಡಿಲ್ಲ, ಘಟನೆಯಲ್ಲಿ ನನ್ನ ಮಗನ ತಪ್ಪು ಇಲ್ಲ. ಇದೇ ಎಂದು ಸಾಬೀತಾದರೆ ಕ್ರಮ ತೆಗೆದುಕೊಳ್ಳಲಿ ಎಂದು ಮಾನಪ್ಪ ವಜ್ಜಲ್ ಹೇಳಿದ್ದಾರೆ. ಇದನ್ನೂ ಓದಿ: ಹಟ್ಟಿ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಪುತ್ರನ ಗುಂಡಾಗಿರಿ, ಎಫ್‍ಐಆರ್ ದಾಖಲು

ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹೈಗ್ರೌಂಡ್ಸ್ ಠಾಣೆಯಲ್ಲಿ ಆಂಜನೇಯ ಮಾನಪ್ಪ ವಜ್ಜಲ್ ವಿರುದ್ಧ ಹಲ್ಲೆಗೆ ಒಳಗಾದ ಉದ್ಯಮಿ ದೀಪಕ್ ರೈ ಪುತ್ರ ವಿಕ್ರಮ್ ರೈ ದೂರು ನೀಡಿದ್ದು, ಎಫ್‍ಐಆರ್ ದಾಖಲಾಗಿದೆ. ಪಂಚ್ ಮಾಡುವ ಆಯುಧದಿಂದ ಹಲ್ಲೆ ನಡೆಸಿದ್ದು, ಬರೋಬ್ಬರಿ ಮೂರು ಕಾರುಗಳಿಂದ ಪಂಚ್ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ಸುಮಾರು 10 ರಿಂದ 15 ಹುಡುಗರನ್ನು ಕರೆಸಿ ಉದ್ಯಮಿ ದೀಪಕ್ ಪುತ್ರ ವಿಕ್ರಮ್ ರೈ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಇತ್ತ ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ಸಹ ಪ್ರತಿ ದೂರು ನೀಡಿದ್ದಾರೆ. ಗಲಾಟೆ ಸಂಬಂಧ ಇಬ್ಬರ ದೂರುಗಳ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 124, 324, 504, 506, 149 ಅಡಿ ಎಫ್‍ಐಆರ್ ಮಾಡಿದ್ದಾರೆ.

ಏನಿದು ಪ್ರಕರಣ?
ವಸಂತನಗರದಲ್ಲಿರುವ ಮಾನಪ್ಪ ವಜ್ಜಲ್ ರ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಗಲಾಟೆಯಾಗಿತ್ತು. ಸೆ.12ರಂದು ರಾತ್ರಿ 10 ಗಂಟೆಗೆ ಸ್ನೇಹಿತ ರೋಲ್ಟ್ ಮೆರೇನ್ ರನ್ನು ಡ್ರಾಪ್ ಮಾಡಲು ವಿಕ್ರಮ್ ಎಂಬೆಸಿ ಹ್ಯಾಬಿಟೆಟ್ ಅಪಾರ್ಟ್ ಮೆಂಟ್ ಬಳಿ ಬಂದಿದ್ದ. ಈ ವೇಳೆ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ಹಿಂದೆಯೇ ಪಾರ್ಕಿಂಗ್ ವಿಚಾರವಾಗಿ ಮಾನಪ್ಪ ವಜ್ಜಲ್ ಪುತ್ರ ಎರಡು ಬಾರಿ ಗಲಾಟೆ ಮಾಡಿದ್ದರಂತೆ. ಇದನ್ನೂ ಓದಿ: ವಿಜಯೇಂದ್ರ ಯಾವುದೇ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‍ವೈ

ಇದೀಗ ಆಂಜನೇಯ ಮತ್ತು ಮೌನೇಶ್ ಸೇರಿ 10 ರಿಂದ 15 ಜನ ಹುಡುಗರನ್ನು ಕರೆಸಿ ಹಲ್ಲೆ ನಡೆಸಿದ್ದಾರೆ. ಬೆಂಜ್, ಸೆಲ್ಟೋಸ್ ಮತ್ತು ಫಾಚ್ರ್ಯೂನರ್ ಕಾರುಗಳಿಂದ ಪಂಚ್ ಮಾಡುವ ಆಯುಧ ಹೊರತೆಗೆದು ಹಲ್ಲೆ ಮಾಡಿದ್ದಾರೆ. ತಲೆ, ಕಣ್ಣು ಮತ್ತು ದೇಹದ ಇತರೆ ಭಾಗಗಳಿಗೆ ಹಲ್ಲೆ ಮಾಡಿದ್ದಾರೆ. ಕಣ್ಣಿನ ಮೇಲ್ಭಾಗಕ್ಕೆ ರಕ್ತ ಬರುವಂತೆ ಗಾಯಗೊಳಿಸಿದ್ದಾರೆ. ಅಲ್ಲದೆ ನೀನು ಎಲ್ಲಿಗೆ ಹೋದರು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ನೀನು ಪೊಲೀಸ್ ಠಾಣೆಗೆ ಹೋದರೂ ನಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಧಮಕಿ ಹಾಕಿದ್ದಾರೆ. ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಚೇತನ್ ಅವರು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹಲ್ಲೆ ನಂತರ ಎರಡೂ ಕಡೆಯವರು ರಾಜಿಗೆ ಮುಂದಾಗಿದ್ದರು. ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ದೂರು ಕೊಟ್ಟರೆ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿ ಕಳುಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *