ಬೆಂಗಳೂರು: ಮಂಗಳವಾರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ನಲ್ಲಿ ಸಂಭವಿಸಿದ ಅಪಘಾತಕ್ಕೆ ಕಾರಿನ ಅತೀ ವೇಗವೇ ಕಾರಣ ಎಂದು ಮೆಲ್ನೋಟಕ್ಕೆ ತಿಳಿದು ಬಂದಿದೆ.
ಆರಂಭದಲ್ಲಿ ಬುಲೆಟ್ ಬೈಕಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಮೊದಲು ಬೈಕಿಗೆ ಗುದ್ದಿ ಬಳಿಕ ಯುವಕ, ಯುವತಿಗೆ ಕಾರು ಗುದ್ದಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ
ಪ್ರೀತಮ್ ಹಾಗೂ ಕೃತಿಕಾ ಬೈಕ್ ನಿಲ್ಲಿಸಿ ಸೈಟ್ ಸೀಯಿಂಗ್ ಮಾಡುತ್ತಿದ್ದರು. ಈ ವೇಳೆ ಕಾರು ಚಾಲಕ ನಿತೀಶ್ ಅತಿ ವೇಗವಾಗಿ ಬಂದು ಮೊದಲಿಗೆ ಬೈಕ್ ಗೆ ಡಿಕ್ಕಿ ಹೊಡೆದು ಆ ನಂತರ ಪ್ರೀತಮ್ ಹಾಗೂ ಯುವತಿಗೆ ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ:ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಮೇಲಿನಿಂದ ಬಿದ್ದು ಟೆಕ್ಕಿ ಯುವಕ, ಯುವತಿ ಸಾವು
ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಕಾರು ಚಾಲಕ ನಿತೇಶ್, ನಿನ್ನೆ ಕ್ರಿಕೆಟ್ ಆಟವನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಈ ವೇಳೆಯಲ್ಲಿ ಆತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ಈ ಅಪಘಾತವನ್ನು ಮಾಡಿದ್ದಾನೆ.
ಅಪಘಾತದಲ್ಲಿ ಮೃತ ಪಟ್ಟಿರುವ ಪ್ರೀತಮ್ ಕುಮಾರ್ ಹಾಗೂ ಕೃತಿಕಾ ಇಬ್ಬರು ಮೂಲತಃ ಚೆನ್ನೈ ಮೂಲದವರು ಎಂದು ತಿಳಿದು ಬಂದಿದೆ. 30 ವರ್ಷದ ಪ್ರೀತಮ್ ಕುಮಾರ್ ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡುತ್ತಿದ್ದು, ಕೃತಿಕಾ ಐಟಿ ಕಂಪನಿ ಉದ್ಯೋಗಿಯಾಗಿದ್ದರು.
ಪ್ರೀತಮ್ ಹಾಗೂ ಕೃತಿಕಾ ಕಳೆದ 5 ವರ್ಷದಿಂದ ಪರಸ್ಪರ ಸ್ನೇಹಿತರು. ಅಪಘಾತದಿಂದ ಕಾರು ಚಾಲಕ ಅಸ್ಪತ್ರೆಗೆ ದಾಖಲಾಗಿದ್ದು ಅವರ ಚೇತರಿಕೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.