ಉಪನಗರ ವರ್ತುಲ ರಸ್ತೆ ಯೋಜನೆ ಶೀಘ್ರವೇ ಕೈಗೆತ್ತಿಕೊಳ್ಳಲು ಕೇಂದ್ರಕ್ಕೆ ಸಿಎಂ ಮನವಿ

Public TV
2 Min Read
Chief Minister of Karnataka basavaraj bommai called on Union Minister nitin gadkari in New Delhi

ನವದೆಹಲಿ: ಬೆಂಗಳೂರು ನಗರ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲು ಪೂರಕವಾದ ಉಪನಗರ ವರ್ತುಲ ರಸ್ತೆ ಯೋಜನೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಭೂಸಾರಿಗೆ, ರಾಷ್ಟ್ರೀಯ ಹೆದ್ದಾರಿ ಹಾಗೂ ಎಂಎಸ್‍ಎಂಇ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.

ನವದೆಹಲಿಯಲ್ಲಿ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಯವರು ಭಾರತ್‍ಮಾಲಾ ಪರಿಯೋಜನಾ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಬೆಂಗಳೂರು ಸುತ್ತಲಿನ ಸಂಚಾರವನ್ನು ಸುಗಮ ಗೊಳಿಸುವ ಉಪನಗರ ವರ್ತುಲ ರಸ್ತೆ ಯೋಜನೆಯ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಸಚಿವರು ಒಪ್ಪಿರುವುದನ್ನು ಸ್ಮರಿಸಿದರು. ಈ ಸಭೆಯಲ್ಲಿ ಚರ್ಚಿಸಿದಂತೆ ಕರ್ನಾಟಕ ಸರ್ಕಾರವು ಭೂಸ್ವಾಧೀನ ವೆಚ್ಚ 1560 ಕೋಟಿ ರೂ.ಗಳ ಶೇ.30ರಷ್ಟನ್ನು ಭರಿಸಲು ಸಮ್ಮತಿ ಪತ್ರ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ಭೇಟಿಯ ವೇಳೆ ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅವುಗಳ ದುರಸ್ತಿಗೆ 184.85 ಕೋಟಿ ರೂ. ಗಳನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ:  ಶಿರಾಡಿ ಘಾಟ್ ನಾಲ್ಕು ಪಥದ ರಸ್ತೆ ಪೂರ್ಣಗೊಳಿಸಿ – ಗಡ್ಕರಿ ಬಳಿ ಸಿಎಂ ಮನವಿ

Gadkari and Bommayi

ಈ ಸಂದರ್ಭದಲ್ಲಿ ಶಿರಾಡಿ ಘಾಟಿಯಲ್ಲಿ ಟನೆಲ್ ಬೈಪಾಸ್ ನಿರ್ಮಾಣ, ವಿಜಯಪುರ – ಸಂಕೇಶ್ವರ ಹೆದ್ದಾರಿ ಸುಧಾರಣೆ ಕುರಿತು ಸಹ ಚರ್ಚಿಸಲಾಯಿತು.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ ನೀಡಿರುವ ನಾಲ್ಕು ಹೆದ್ದಾರಿಗಳ ಕುರಿತು ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದ್ದು, ಅವುಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಕಂದಾಯ ಸಚಿವ ಆರ್. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *