ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

Public TV
2 Min Read
DK SHIVAKUMAR 1

ಬೆಂಗಳೂರು: ಕೋವಿಡ್ ನಿಬಂಧ ಇತಿಮಿತಿಗಳ ಮಧ್ಯೆ ನಾವು ಬೆಳಗಾವಿ, ಕಲಬುರ್ಗಿ, ಧಾರವಾಡದ ಪಾಲಿಕೆ ಚುನಾವಣೆ ಎದುರಿಸಿದ್ದು, ನಮಗೆ ಸಮಾಧಾನಕರ ಫಲಿತಾಂಶ ಬಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

CONGRESS

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಲ್ಲಿ ಗೆಲುವು ಸಿಗದಿದ್ದರೂ ನಮ್ಮ ಫಲಿತಾಂಶ ಸುಧಾರಿಸಿದೆ. ಇಷ್ಟು ದಿನ ಬೆಳಗಾವಿಯಲ್ಲಿ ಪಕ್ಷದಿಂದ ಅಭ್ಯರ್ಥಿ ನಿಲ್ಲಿಸುತ್ತಿರಲಿಲ್ಲ. ಅಲ್ಲಿ ಸುಮಾರು 10 ಕ್ಷೇತ್ರ ಗೆಲ್ಲುವುದಾಗಿ ಕಾರ್ಯಕರ್ತರು ವರದಿ ಕೊಟ್ಟಿದ್ದರು. ಅಭ್ಯರ್ಥಿಯನ್ನು ನಿಲ್ಲಿಸಬಾರದು ಎಂದು ಸ್ಥಳೀಯ ಮಟ್ಟದಲ್ಲಿ ಒತ್ತಡವೂ ಇತ್ತು. ಆದರೂ ನಾವು ಅಭ್ಯರ್ಥಿಗಳನ್ನು ನಿಲ್ಲಿಸಿದೆವು. ನಮಗೆ ಬೆಳಗಾವಿಯಲ್ಲಿ ದೊಡ್ಡ ಸಂಖ್ಯೆ ಬರದೇ ಇದ್ದರೂ ಉತ್ತಮ ಪ್ರಾರಂಭ ಪಡೆದಿದ್ದೇವೆ. ಮುಂದೆ ನಾವು ಎಲ್ಲಿ ಸರಿ ಮಾಡಿಕೊಳ್ಳಬೇಕೋ ಅಲ್ಲಿ ಮಾಡಿಕೊಳ್ಳುತ್ತೇವೆ. ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ. ಮುಂದೆ ಜಾಗೃತರಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಲನ್ನ ನಾವು ಒಪ್ಪಿಕೊಳ್ತೇವೆ: ಡಿಕೆಶಿ

ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದರೂ ಅದು ಸ್ಥಳೀಯ ಅಭ್ಯರ್ಥಿಗಳ ಮೇಲೆ ನಿರ್ಧಾರವಾಗುತ್ತದೆ. ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುವಂತಹ ಮೀಸಲಾತಿ ನೀಡಿ ಚುನಾವಣೆ ನಡೆಸಲಾಗಿದೆ. ರಾಜಕಾರಣದಲ್ಲಿ ಇದು ಸಹಜ. ಈ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಹುಬ್ಬಳ್ಳಿ-ಧಾರವಾಡದಲ್ಲಿ ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಪ್ರತಿನಿಧಿಸುತ್ತಿದ್ದು, ಆದರೂ ನಮಗೆ ಬಂದಿರುವ ಫಲಿತಾಂಶ ಸಮಾಧಾನ ತಂದಿದೆ. ನಾವು ಎಲ್ಲ ಕಡೆಗಳಲ್ಲೂ ಹೋಗಿ ಸಭೆ ಮಾಡಿದ್ದೇವೆ, ಕಾರ್ಯಧ್ಯಕ್ಷರಿಗೆ ಉಸ್ತುವಾರಿ ಕೊಟ್ಟಿದ್ದೆವು. ಕೋವಿಡ್ ಸಮಯದಲ್ಲಿ ಇದ್ದ ಇತಿಮಿತಿಯಲ್ಲಿ ನಾವು ಕೆಲಸ ಮಾಡಿದ್ದೇವೆ. ಬಿಜೆಪಿಯವರಂತೆ ನಮಗೆ ಆರ್ಥಿಕ ಶಕ್ತಿ ಇಲ್ಲದೇ ಇರಬಹುದು, ಆದರೆ ಉಳಿದ ಎಲ್ಲ ರೀತಿ ಶ್ರಮವನ್ನು ನಾವು ಹಾಕಿದ್ದೇವೆ ಎಂದು ನುಡಿದರು.

ನಮಗೆ ಪ್ರಚಾರ ಮಾಡಲು ಎಲ್ಲಿ ಅವಕಾಶ ನೀಡಿದ್ದರು? ಕೋವಿಡ್ ನಿಯಮಾವಳಿಗಳ ಹೆಸರಲ್ಲಿ ನಮ್ಮನ್ನು ಕಟ್ಟಿಹಾಕಿದರು. ಆದರೆ ಅವರು ಮಾತ್ರ, ಆಡಳಿತ ಯಂತ್ರ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಪ್ರಚಾರ ಮಾಡಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ನಮಗೆ ಕೊಡಲಿಲ್ಲ. ಹೀಗಾಗಿ ನಾವು ಇತಿಮಿತಿಯಲ್ಲೇ ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ರಾಜಕಾರಣಿ: ಶ್ರೀರಾಮುಲು

ಈ ಫಲಿತಾಂಶ ಬಿಬಿಎಂಪಿ, ಬೇರೆ ಚುನಾವಣೆಗಳಿಗೆ ದಿಕ್ಸೂಚಿ ಎಂದು ಬಿಜೆಪಿಯವರು ವಿಶ್ಲೇಷಿಸುತ್ತಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ತಿಂಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 7ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್, ಬಿಜೆಪಿ ಕೇವಲ 1ರಲ್ಲಿ ಮಾತ್ರ ಜಯಿಸಿತ್ತು. ಆಗ ನಾನು ಇದು ಮುಂದಿನ ಚುನಾವಣೆ ದಿಕ್ಸೂಚಿ ಎಂದು ಹೇಳಿದ್ದೆನಾ? ಮೊನ್ನೆ ನಡೆದ ಉಪಚುನಾವಣೆ ದಿಕ್ಸೂಚಿ ಎಂದು ಹೇಳಲು ಸಾಧ್ಯವೇ ಎಂದು ಮರು ಪ್ರಶ್ನಿಸಿದರು. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು

Share This Article
Leave a Comment

Leave a Reply

Your email address will not be published. Required fields are marked *