ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಗ್ರಾ.ಪಂ. ಸದಸ್ಯ ಏಕಾಂಗಿ ಪ್ರತಿಭಟನೆ

Public TV
1 Min Read
chikkamagaluru protest

ಚಿಕ್ಕಮಗಳೂರು: ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯ ಏಕಾಂಗಿಯಾಗಿ ಅದೇ ಗ್ರಾಮ ಪಂಚಾಯಿತಿ ಮುಂದೆ ಧರಣಿಗೆ ಕೂತಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಿ.ಕಣಬೂರಿನಲ್ಲಿ ನಡೆದಿದೆ.

chikkamaluru protest 2

ಗ್ರಾಮ ಪಂಚಾಯಿತಿಯ ಸದಸ್ಯ ಅಶ್ರಫ್ ಬಿ.ಕಣಬೂರು ಗ್ರಾಮ ಪಂಚಾಯಿತಿ ಮುಂದೆ ಏಕಾಂಗಿಯಾಗಿ ಧರಣಿ ಕೂತಿದ್ದಾರೆ. ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ರಮ ಕಟ್ಟಡಗಳು ಹಾಗೂ ಅವುಗಳಿಗೆ ನೀಡಿರುವ ವಿದ್ಯುತ್ ಮೀಟರ್ ಬೋರ್ಡ್‍ಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ಸದಸ್ಯರು ಸಭೆ ಸೇರಿ ತೀರ್ಮಾನಿಸಿದ್ದರು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯನೇ ಪಂಚಾಯಿತಿ ವಿರುದ್ಧ ಧರಣಿ ಕೂತಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಕ್ರಮ ಕಟ್ಟಡದ ಜಾಗವನ್ನ ತೆರವುಗೊಳಿಸುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಏಕಾಂಗಿಯಾಗಿ ಹೋರಾಟಕ್ಕಿಳಿದಿದ್ದಾರೆ. ಗ್ರಾಮ ಪಂಚಾಯಿತಿಯ ಉಳಿದ ಸದಸ್ಯರು ಮನವೊಲಿಸಿದರು ಮನವೊಲಿಕೆಗೆ ಬಗ್ಗದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. ಅಶ್ರಫ್ ಈ ಹಿಂದೆ ಕೂಡ ಹಲವಾರು ಬಾರಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಬಾಳೆಹೊನ್ನೂರು ಬಸ್ ನಿಲ್ದಾಣದ ಬಳಿ, ಗ್ರಾಮ ಪಂಚಾಯಿತಿ ಮುಂಭಾಗ ಸೇರಿದಂತೆ ಹಲವು ಸಂದರ್ಭಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ಈಗ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅದೇ ಗ್ರಾಮ ಪಂಚಾಯಿತಿ ವಿರುದ್ಧ ಹೋರಾಟಕ್ಕೆ ಕೂತಿದ್ದಾರೆ.

Share This Article