ನವದೆಹಲಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮುಂದುವರಿದಿದೆ. ಸಂಪೂರ್ಣ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು, ಭಾರತದ ರಫ್ತು ಹಾಗೂ ಆಮದು ವ್ಯವಹಾರಕ್ಕೆ ನಿರ್ಬಂಧ ಹೇರಿದೆ. ಇದರ ಎಫೆಕ್ಟ್ ನಿಂದಾಗಿ ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೇರಿದೆ.
ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಎಲ್ಲ ಆಮದು ಹಾಗೂ ರಫ್ತುಗಳನ್ನು ನಿಲ್ಲಿಸಿದ್ದಾರೆ ಎಂದು ಭಾರತೀಯ ರಫ್ತು ಸಂಸ್ಥೆ(ಎಫ್‍ಐಇಒ)ಯ ಮಹಾನಿರ್ದೇಶಕ(ಡಿಜಿ) ಡಾ.ಅಜಯ್ ಸಹಾಯ್ ಹೇಳಿದ್ದಾರೆ. ವರದಿಗಳ ಪ್ರಕಾರ, ತಾಲಿಬಾನ್ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ
ಅಫ್ಘಾನಿಸ್ತಾನದಲ್ಲಿನ ಪ್ರಕ್ಷುಬ್ಧತೆಯಿಂದಾಗಿ ಮುಂಬರುವ ದಿನಗಳಲ್ಲಿ ಡ್ರೈ ಫ್ರೂಟ್ಸ್ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಎಫ್‍ಐಇಒ ಕಳವಳ ವ್ಯಕ್ತಪಡಿಸಿದೆ. ಭಾರತ ಶೇ.85ರಷ್ಟು ಡ್ರೈ ಫ್ರೂಟ್ಸ್ ನ್ನು ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಇದರ ನೇರ ಪರಿಣಾಮ ಭಾರತದ ಮೇಲಾಗುತ್ತಿದೆ. ಡ್ರೈ ಫ್ರೂಟ್ಸ್ ಗಳ ಬೆಲೆ ಗಗನಕ್ಕೇರುತ್ತಿದೆ. ಹಬ್ಬಗಳ ಸೀಸನ್‍ನಲ್ಲೇ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರ ಕಣ್ಣು ಕೆಂಪಾಗುವಂತೆ ಮಾಡಿದೆ.
ಡಾ.ಅಜಯ್ ಸಹಾಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಪಾಕಿಸ್ತಾನದ ಮಾರ್ಗವಾಗಿ ಭಾರತಕ್ಕೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಪ್ರಸ್ತುತ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆ ನಿಲ್ಲಿಸಿದೆ, ಹೀಗಾಗಿ ಆಮದು ನಿಂತಿದೆ. ವಾಣಿಜ್ಯ ವಹಿವಾಟು ಶೀಘ್ರ ಆರಂಭವಾಗದಿದ್ದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಇನ್ನಷ್ಟು ಏರಿಕೆಯಾಗಲಿದೆ. ಅಲ್ಲದೆ ವ್ಯಾಪಾರಿಗಳು ಪರ್ಯಾಯ ಪೂರೈಕೆ ಮೂಲಗಳನ್ನು ಹುಡುಕಿಕೊಳ್ಳಬೇಕಿದೆ ಎಂದು ಅವರು ಹೇಳಿದರು. ಇದನ್ನೂ ಓದಿ:ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್
2020-21ನೇ ಆರ್ಥಿಕ ವರ್ಷದಲ್ಲಿ ಅಫ್ಘಾನಿಸ್ತಾನದೊಂದಿಗಿನ ಭಾರತದ ಆಮದು ಬಿಲ್ 3,753.47 ಕೋಟಿ ರೂ.ಗಳಾಗಿದ್ದು, ಅದರಲ್ಲಿ 2,389.86 ಕೋಟಿ ರೂ. ಖಾದ್ಯ ಹಣ್ಣುಗಳು, ನಟ್ಸ್ ಹಾಗೂ ಸಿಟ್ರಸ್ ಹಣ್ಣುಗಳಾಗಿವೆ.
ಅಫ್ಘಾನ್-ಭಾರತದ ವ್ಯಾಪಾರ ವಹಿವಾಟು
ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು 2020-21ರಲ್ಲಿ 1.4 ಬಿಲಿಯನ್ ಡಾಲರ್, 2019-20ರಲ್ಲಿ 1.52 ಬಿಲಿಯನ್ ಡಾಲರ್ ಆಗಿತ್ತು. ಭಾರತದಿಂದ 826 ಮಿಲಿಯನ್ ಡಾಲರ್ ಮೌಲ್ಯದ ಸರಕನ್ನು ರಫ್ತು ಮಾಡಲಾಗುತ್ತಿತ್ತು. 2020-21ರಲ್ಲಿ 510 ಮಿಲಿಯನ್ ಡಾಲರ್ ಸರಕನ್ನು ಆಮದು ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ:ಭಾರತೀಯ ರಾಯಭಾರ ಕಚೇರಿ ಮೇಲೆ ತಾಲಿಬಾನ್ ದಾಳಿ
ಆಮದು, ರಫ್ತುಗಳ ವಿವರ
ಭಾರತಕ್ಕೆ ಅಫ್ಘಾನಿಸ್ತಾನ ಒಣ ದ್ರಾಕ್ಷಿ, ವಾಲ್‍ನಟ್, ಬಾದಾಮಿ, ಸಂಜೂರದ ಹಣ್ಣು, ಪೈನ್ ನಟ್ಸ್, ಪಿಸ್ತಾ, ಒಣಗಿದ ಏಪ್ರಿಕಾಟ್ ಹಾಗೂ ತಾಜಾ ಹಣ್ಣುಗಳಾದ ಏಪ್ರಿಕಾಟ್, ಚೆರ್ರಿ, ಕಲ್ಲಂಗಡಿ ಹಾಗೂ ಕೆಲ ಔಷಧಿ ಗಿಡಮೂಲಿಕೆಗಳನ್ನು ರಫ್ತು ಮಾಡುತ್ತಿತ್ತು. ಅದೇ ರೀತಿ ಭಾರತ ಅಫ್ಘಾನಿಸ್ತಾನಕ್ಕೆ ಚಹಾ, ಕಾಫಿ, ಮೆಣಸು, ಹತ್ತು, ಆಟಿಕೆಗಳು, ಪಾದರಕ್ಷೆಗಳು ಹಾಗೂ ಇತರೆ ದಿನಬಳಕೆ ವಸ್ತುಗಳನ್ನು ರಫ್ತು ಮಾಡುತ್ತಿತ್ತು.