ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಪ್ರತ್ಯೇಕ ರಿಟ್ ಅರ್ಜಿಗಳಿಗೆ ಮಧ್ಯಂತರ ಆದೇಶ ನೀಡಲು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.
ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ್ ಹಾಗೂ ಬಸವರಾಜ ತೇರದಾಳರವರು ರಿಟ್ ಅರ್ಜಿ ಸಲ್ಲಿಸಿದ್ದರು. ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಶೇ.50 ಕ್ಕಿಂತ ಹೆಚ್ಚು ಸ್ಥಾನ, ಉಳಿದ ಮೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಮಹಿಳೆಯರಿಗೆ ಶೇ.50 ಕ್ಕಿಂತ ಕಡಿಮೆ ಸ್ಥಾನ ಹಂಚಿಕೆ ಮಾಡಿ ತಾರತಮ್ಯ ಮಾಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನವಾಗಿ ಶೇ. 50ರಷ್ಟು ವಾರ್ಡ್‍ಗಳನ್ನು ಹಂಚಿಕೆ ಮಾಡಬೇಕೆಂದು ಕೋರಿ ಅಲ್ತಾಫ್ ಕಿತ್ತೂರ್ ಹಾಗೂ ಮೀಸಲಾತಿ ನಿಗದಿಯಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆ ಎಂದು ಬಸವರಾಜ ತೇರದಾಳ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ:ಗದ್ದೆಯ ಬದುವಿನ ಮೇಲೆ ರೈತರಂತೆ ನಡೆದ ಹುಲಿ- ಆತಂಕದಲ್ಲಿ ಹಳ್ಳಿಗರು
ಈ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಪಾಲಿಕೆ ಚುನಾವಣೆಗೆ ತಡೆಯಿಲ್ಲ ಎಂದು ಸ್ಪಷ್ಟಪಡಿಸಿದೆ. ವಿಚಾರಣೆಯನ್ನು ಚಾಲ್ತಿಯಲ್ಲಿಟ್ಟು ಮುಂದೂಡಿದೆ. ವಿಚಾರಣೆಯ ಮುಂದಿನ ದಿನಾಂಕವನ್ನು ಸೂಚಿಸಿಲ್ಲ ಎಂದು ತೇರದಾಳ ತಿಳಿಸಿದ್ದಾರೆ. ಪಾಲಿಕೆ ಚುನಾವಣೆಗೆ ತಡೆ ನೀಡುವಂತೆ ಧಾರವಾಡ ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಕುರಿತು ಶುಕ್ರವಾರ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಅಲ್ತಾಫ್ ಕಿತ್ತೂರ ತಿಳಿಸಿದ್ದಾರೆ. ಇದನ್ನೂ ಓದಿ:ಹಣದಾಸೆಗೆ ಗಾಂಜಾ ಮಾರಾಟ- 19ರ ಯುವಕ ಅರೆಸ್ಟ್