ಎನ್‍ಇಪಿ ಮೂಲಕ ಶಿಕ್ಷಣದಲ್ಲಿ ಸುಧಾರಣೆ: ಬಿ.ಸಿ.ನಾಗೇಶ್

Public TV
3 Min Read
bc nagesh 4

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಬದಲಾವಣೆಗೆ ನಾಂದಿ ಹಾಡುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಹೊರ ತಂದಿರುವ ‘ನ್ಯಾಕ್ ಸುದ್ದಿಪತ್ರ’ ಬಿಡುಗಡೆ ಮಾಡಿ ವಿಶ್ವವಿದ್ಯಾಲಯಗಳು ಮತ್ತು ಪ್ರಮುಖ ಕಾಲೇಜುಗಳ ಪ್ರಾಂಶುಪಾಲರನ್ನು ಉದ್ದೇಶಿಸಿ ಬಿ.ಸಿ ನಾಗೇಶ್ ಮಾತನಾಡಿದರು. ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಅದರ ಮೂಲಕ ವ್ಯಕ್ತಿತ್ವ ವಿಕಸನವಾಗಬೇಕು ಎಂದು ಕನಸು ಕಂಡಿರುವ ದೇಶದ ಅನೇಕ ಶ್ರೇಷ್ಠ ಮಹಾಪುರುಷರ ಎಲ್ಲ ಕನಸುಗಳನ್ನು ನನಸು ಮಾಡಲು ಸಾಧ್ಯವಾಗದೆ ಇರಬಹುದು. ಆದರೂ ನಾವು ಶಿಕ್ಷಣದಲ್ಲಿ ಸಾಕಷ್ಟು ಮೈಲುಗಲ್ಲುಗಳನ್ನು ತಲುಪಿದ್ದೇವೆ. ದೇಶದ ಎಲ್ಲ ಮೂಲೆಗಳಲ್ಲೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

school open

ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡಲು ಅಗತ್ಯವಾದ ಮೂಲಸೌಕರ್ಯಗಳನ್ನು ಹೊಂದಿರುವಂತಹ ಶಾಲೆಗಳನ್ನು ತೆರೆಯಲಾಗಿದೆ. 2000 ಇಸವಿಗೆ ಮೊದಲು ಚುನಾವಣೆ ಕರ್ತವ್ಯವೆಂದರೆ ಶಿಕ್ಷಕರು ಬೇಡವೇ ಬೇಡ ಎನ್ನುತ್ತಿದ್ದರು. ಶೌಚಗೃಹ ಕೊರತೆ, ರಾತ್ರಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇರುತ್ತಿರಲಿಲ್ಲ. ಆದರೆ, ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಿಸಲು ಆರಂಭವಾದ ಸರ್ವ ಶಿಕ್ಷಣ ಅಭಿಯಾನ ಬದಲಾವಣೆಗೆ ಮುನ್ನುಡಿ ಬರೆಯಿತು ಎಂದು ಸಚಿವರು ನುಡಿದರು.

ಈಗ ನಮ್ಮ ಇಲಾಖೆಯಲ್ಲೇ 48 ಸಾವಿರ ಶಾಲೆಗಳಿವೆ. ಶಾಲೆಗಳು ನಮ್ಮ ನಿರೀಕ್ಷೆಯಂತೆ ಇಲ್ಲದಿರಬಹುದು. ಆದರೆ, ಪಾಠದ ಗುಣಮಟ್ಟ ಚೆನ್ನಾಗಿದೆ. ಗುಣಮಟ್ಟ ಸುಧಾರಣೆಯಾಗದಿರಲು ಪ್ರೇರಣೆ, ಅಗತ್ಯ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆ ಇರಬಹುದು. ಬೋಧನೆ ಜೊತೆಗೆ ಬೇರೆ ಬೇರೆ ಕೆಲಸಗಳ ಜವಾಬ್ದಾರಿ, ಕೆಲಸದ ಒತ್ತಡ ಅದಕ್ಕೆ ಕಾರಣವಾಗಿರಬಹುದು ಎಂದು ಸಚಿವರು ಅಭಿಪ್ರಾಯಪಟ್ಟರು.

minister bc nagesh

ಮೆಕಾಲೆ ಶಿಕ್ಷಣದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಆಗಿರಲಿಲ್ಲ. ಈಗ ಗಟ್ಟಿ ನಿರ್ಧಾರ ತೆಗೆದುಕೊಂಡು ಬದಲಾವಣೆ ತರಬಲ್ಲ ಸಮರ್ಥ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಈ ದೇಶ ಪಡೆದಿದೆ. ದೇಶದ ಪ್ರತಿಯೊಬ್ಬ ಪ್ರಜೆಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಅದೇ ನಮ್ಮ ಗುರಿಯಾಗಿರಬೇಕು ಎಂದು ನಮ್ಮ ಪೂರ್ವಜರು, ಸ್ವಾತಂತ್ರ್ಯ ಹೋರಾಟಗಾರರು ಕಂಡಿರುವ ಕನಸುಗಳನ್ನು ನನಸು ಮಾಡುವ ಗುರಿಯನ್ನು ಪ್ರಧಾನಿಯವರು ಹೊಂದಿದ್ದಾರೆ. ಪ್ರಸಕ್ತ ಸನ್ನಿವೇಶ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುತ್ತಿದೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ಜನರಿಗಷ್ಟೇ ಕೊರೊನಾ ರೂಲ್ಸ್- ಜನಪ್ರತಿನಿಧಿಗಳು ಡೋಂಟ್‍ಕೇರ್

ವಿಶ್ವವಿದ್ಯಾಲಯ ಮಾದರಿಯ ಶೈಕ್ಷಣಿಕ ಚಟುವಟಿಕೆಗಳ ವ್ಯವಸ್ಥೆಯನ್ನು ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಹಂತದಲ್ಲೂ ಅಳವಡಿಸಿಕೊಳ್ಳಲು ಸಾಧ್ಯವಾದರೆ ಗುಣಮಟ್ಟ ಸುಧಾರಣೆಯಾಗಬಹುದು. ಈ ಕುರಿತು ಯೋಚನೆ ಮಾಡಬೇಕು. ನ್ಯಾಕ್‍ನಂತಹ ಪ್ರತಿಷ್ಠಿತ ಸಂಸ್ಥೆಗಳು ಬದಲಾವಣೆ ಮತ್ತು ಸುಧಾರಣೆಗಾಗಿ ಹೊಸ ಯೋಜನೆಗಳ ನೀಲಲಕ್ಷೆ ರೂಪಿಸಬೇಕು. ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಇರುವ ಕೊರತೆಗಳನ್ನು ನಿವಾರಿಸಿ ಬದಲಾವಣೆ ತರುವ ಸಾಮರ್ಥ್ಯ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿವೆ ಎಂದು ಸಚಿವರು ಹೇಳಿದರು.

bc nagesh

ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಯಾಗುವಲ್ಲಿ ನ್ಯಾಕ್ ನಿರ್ದೇಶಕರಾದ ಪ್ರೊ. ಎಸ್.ಸಿ. ಶರ್ಮ ಅವರ ಪಾತ್ರ ಮಹತ್ವದ್ದಾಗಿದೆ. ಸಿಎಸ್‍ಆರ್ ನಿಧಿ ಮೂಲಕ ವಿವಿ ಆವರಣದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಶರ್ಮ ಕಾರಣರಾದರು ಎಂದು ನ್ಯಾಕ್ ನಿರ್ದೇಶಕರ ಕೆಲಸಗಳ ಕುರಿತು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ದೇಶದಲ್ಲಿ ಯುವ ಜನಸಂಖ್ಯೆ ದೊಡ್ಡದಾಗಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ದೊಡ್ಡ ಆಸ್ತಿ ಮಾಡುವ ಜವಾಬ್ದಾರಿ ನಮ್ಮ, ನಿಮ್ಮ ಕೈಯಲ್ಲಿದೆ. ಸುಧಾರಣೆ ಆಗಬೇಕು ಎಂದು ಸಚಿವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *