ಓಮ್ನಿ ಮೇಲೆ ಒಂಟಿ ಸಲಗ ದಾಳಿ – ನಾಲ್ವರು ಪ್ರಾಣಾಪಾಯದಿಂದ ಪಾರು

Public TV
1 Min Read
omni car 2

ಚಿಕ್ಕಮಗಳೂರು: ಓಮ್ನಿ ಕಾರಿನಲ್ಲಿ ಹೊರನಾಡಿಗೆ ಹೋಗುತ್ತಿದ್ದ ನಾಲ್ವರ ಮೇಲೆ ಒಂಟಿ ಸಲಗ ದಾಳಿ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದೂರು ಸಾರಗೋಡು-ಸಮೀಪದ ಭೈರೇಗುಡ್ಡ ಕ್ರಾಸ್ ಬಳಿ ನಡೆದಿದೆ.

omni car 1

ಚಿಕ್ಕಮಗಳೂರು ತಾಲೂಕಿನ ಜೋಳದಾಳು ಗ್ರಾಮದ ನಾಲ್ವರು ಓಮ್ನಿಯಲ್ಲಿ ಹೊರನಾಡಿಗೆ ಹೋಗುವಾಗ ಭೈರೇಗುಡ್ಡ ಕ್ರಾಸ್ ಬಳಿ ಏಕಾಏಕಿ ಅಡ್ಡ ಬಂದ ಒಂಟಿ ಸಲಗ ದಾಳಿ ಮಾಡಿದೆ. ಕಾರಿನಲ್ಲಿದ್ದ ನಾಲ್ವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದರೆ, ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಕಾರಿನಲ್ಲಿದ್ದವರು ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ.

omni car 3

ಬಳಿಕ ಒಂಟಿ ಸಲಗ ಓಮಿನಿ ಕಾರಿನ ಮೇಲೆ ಮನಸ್ಸೋ ಇಚ್ಛೆ ದಾಳಿ ಮಾಡಿದ್ದು, ಓಮ್ನಿ ಬಹುತೇಕ ಜಖಂಗೊಂಡಿದೆ. ಗಾಯಾಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಲೆನಾಡಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಈಗಾಗಲೇ ಕಳೆದ ಎರಡ್ಮೂರು ವರ್ಷದಿಂದ ಮಲೆನಾಡು ಭಾಗದಲ್ಲಿ ಆನೆ ಹಾವಳಿಯಿಂದ ಮೂರ್ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ಮಲೆನಾಡ ಹೊಲ-ಗದ್ದೆ, ತೋಟಗಳಲ್ಲಿ ದಾಳಿ ಮಾಡುತ್ತಿದ್ದ ಕಾಡಾನೆಗಳು ಈಗ ವಾಹನ ಹಾಗೂ ಜನಸಾಮಾನ್ಯರ ಮೇಲೂ ದಾಳಿ ಮಾಡಲು ಮುಂದಾಗಿವೆ. ಇದರಿಂದ ಮಲೆನಾಡಿಗರಲ್ಲಿ ಆತಂಕ ಮನೆಮಾಡಿದೆ.

omni car

ಮಲೆನಾಡಿಗರು ಕಳೆದ ಒಂದೆರಡು ದಶಕಗಳಿಂದ ಕಾಡಾನೆ ದಾಳಿಗೆ ತುತ್ತಾಗಿರುವ ಮೂಡಿಗೆರೆ ತಾಲೂಕಿನ ಗೌಡಹಳ್ಳಿ, ಸಾರಾಗೋಡು, ಕುಂದೂರು, ಕೋಗಿಲೆ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಹಾವಳಿ ಮೀತಿ ಮೀರಿದೆ. ಆನೆ ಹಾವಳಿಯಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಅಷ್ಟರ ಮಟ್ಟಿಗೆ ಕಾಡಾನೆಗಳ ಹಿಂಡು ಆಗಾಗ್ಗೆ ಹೊಲಗದ್ದೆ, ತೋಟಗಳ ಮೇಲೆ ದಾಳಿ ಮಾಡುತ್ತಿವೆ. ಈಗ ರಸ್ತೆಯಲ್ಲಿ ಸಂಚರಿಸುವವರ ಮೇಲೂ ದಾಳಿಗೆ ಮುಂದಾಗಿರುವುದರಿಂದ ಮಲೆನಾಡಿಗರು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿ ಕೂಡಲೇ ಆನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಸಿಲಿಂಡರ್ ಸ್ಫೋಟಕ್ಕೆ ವ್ಯಕ್ತಿ ಬಲಿ – ಸಾವು ಬದುಕಿನ ಮಧ್ಯೆ ಮಗುವಿನ ಹೋರಾಟ

Share This Article
Leave a Comment

Leave a Reply

Your email address will not be published. Required fields are marked *