ಮಡಿಕೇರಿ: ಲೆಲೇ ಲೈಸಾ ಅನ್ನುತ್ತಾ ಹಗ್ಗ ಹಿಡಿದು ಕೆಸರಿನಲ್ಲಿ ಮಿಂದೆದ್ದು, ಕೊಡಗಿನ ಜನತೆ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾರಳ್ಳಿ ಗ್ರಾಮದ ಶ್ರೀ ಚೆನ್ನಕೇಶವ ಸ್ವಾಮಿ ಯುವಕರ ಸಂಘದಿಂದ ಇದೇ ಮೊದಲ ಬಾರಿಗೆ ಪ್ರಥಮ ವರ್ಷದ ಮೊದಲ ಕೆಸರು ಗದ್ದೆ ಕ್ರೀಡಾ ಕೂಟವನ್ನ ಆಯೋಜನೆ ಮಾಡಲಾಗಿತ್ತು. ಕೆಸರುಗದ್ದೆಯಲ್ಲಿ ಹಗ್ಗ ಜಗ್ಗಾಟ, 100 ಮೀ. 200 ಮೀ. ಕೆಸರು ಗದ್ದೆ ಓಟದ ಸ್ವರ್ಧೆ ಎರ್ಪಡಿಸಲಾಗಿತ್ತು.
ಪುರುಷರ ಹಗ್ಗ ಜಗ್ಗಾಟ ಸಕತ್ ಥ್ರೀಲ್ ನೀಡಿದರೆ ಪುರುಷರಿಗಿಂತ ನಾವೇನು ಕಡಿಮೆ ಇಲ್ಲ, ಎಂಬಂತೆ ಮಹಿಳಾ ಮಣಿಗಳು ಟಫ್ ಫೈಟ್ ಕೊಟ್ಟಿದ್ದಾರೆ. ಪುಟಾಣಿಗಳಂತೂ ಕೆಸರಿನ ಹಬ್ಬದಲ್ಲಿ ಮಿಂದೆದ್ದರು. ಮಡಿಕೇರಿ ತಾಲೂಕಿನ ಬಿಳಿಗಿರಿ ಗ್ರಾಮದಲ್ಲಿಯೂ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ನೂರಾರು ಗ್ರಾಮೀಣ ಭಾಗದ ರೈತಾಪಿ ವರ್ಗದ ಹಿರಿಯರು ಕಿರಿಯರು ಗ್ರಾಮದಲ್ಲಿ ಆಯೋಜನೆ ಮಾಡಿದ ಕ್ರೀಡೆಯಲ್ಲಿ ಭಾಗಿಯಾಗಿದ್ದರು.
ಸಾಕಷ್ಟು ಮಂದಿ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಓಡುತ್ತ, ಹಾರುತ್ತ, ಕೆಸರಲ್ಲಿ ಒದ್ದಾಡುತ್ತ ಎಲ್ಲಾ ಒತ್ತಡವನ್ನ ಮರೆತು ಭಾನುವಾರ ಹಾಯಾಗಿ ಒಂದು ದಿನ ತುಂತುರು ಮಳೆಯ ನಡುವೆ ಕೆಸರು ಗದ್ದೆಯಲ್ಲಿ ಸಕತ್ ಎಂಜಾಯ್ ಮಾಡಿದರು.