ಮಂಡ್ಯ: ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಂಸದ ಜಿ.ಮಾದೇಗೌಡ (92) ವಿಧಿವಶರಾಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಮಾದೇಗೌಡರು ಇಂದು ನಿಧನರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರು, ಕಾವೇರಿ ಹೋರಾಟಗಾರರು, ಮಾಜಿ ಲೋಕಸಭಾ ಸದಸ್ಯರು ಹಾಗು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡರವರು ತೀವ್ರ ಅನಾರೋಗ್ಯದಿಂದ ಕಳೆದ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಶಾಸನಸಭೆ, ಲೋಕಸಭಾ ಸದಸ್ಯರಾಗಿ, ರೈತ ಪರ ಹೋರಾಟಗಾರರಾಗಿ ಜಿಲ್ಲೆಯ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ರವರ ಜೊತೆ ಶ್ರಮಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ ನಿರ್ಮಿಸಿದ್ದರು. ಈ ಹಿಂದೆ ಮಾದೇಗೌಡರೊಂದಿಗೆ ಪ್ರಥಮ ಬಾರಿಗೆ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಎಂ.ಕೃಷ್ಣ ರವರು ತಮ್ಮ ಬಹುಕಾಲದ ಒಡನಾಡಿಯ ಆರೋಗ್ಯ ವಿಚಾರಿಸಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದರು.