16 ವರ್ಷ ತಲೆಮರೆಸಿಕೊಂಡಿದ್ದ ಮಂಗಳೂರಿನ ಆರೋಪಿ ಮುಂಬೈನಲ್ಲಿ ಬಂಧನ

Public TV
2 Min Read
mng

– ಛೋಟಾ ರಾಜನ್ ಸಹಚರನ ಸಹೋದರ ಆರೋಪಿ

ಮಂಗಳೂರು: ನಗರದ ಹೊರವಲಯದ ಪೆರ್ಮುದೆ ಗ್ರಾಮದಲ್ಲಿ ನಡೆದ ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿ 16 ವರ್ಷ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಮುಂಬೈನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

crime medium

ಮೂಲತಃ ಮೂಲ್ಕಿ ನಿವಾಸಿ, ಸದ್ಯ ಮುಂಬೈನ ಸಕಿ ನಾಕಾದಲ್ಲಿ ವಾಸವಿರುವ ಚಂದ್ರಕಾಂತ್ ಪೂಜಾರಿ ಯಾನೆ ಅಣ್ಣು(55) ಬಂಧಿತ ಆರೋಪಿ ಎಂದು ವರದಿಯಾಗಿದೆ.

ಏನಿದು ಪ್ರಕರಣ?
ಬಜ್ಪೆ ವ್ಯಾಪ್ತಿಯ ಪೆರ್ಮುದೆ ಗ್ರಾಮದಲ್ಲಿ 2005ರ ಜನವರಿ 10 ರಂದು ರಾತ್ರಿ ವಿಶ್ವನಾಥ್, ಅಮೀನ್ ಎಂಬವರ ಮನೆಗೆ ಆರೋಪಿಗಳು ಅಕ್ರಮವಾಗಿ ಪ್ರವೇಶಿಸಿದ್ದರು. ಈ ವೇಳೆ ಮನೆಯವರಿಗೆ ಅವಾಚ್ಯವಾಗಿ ನಿಂದಿಸಿ, ಬಾಟ್ಲಿಯಿಂದ ತಲೆಗೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಜೊತೆಗೆ ಜೀವ ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹಿಂದೂ ಯುವತಿಯ ಮದುವೆ ಮಾಡಿದ ಉಳ್ಳಾಲದ ಮುಸ್ಲಿಂ ಕುಟುಂಬ

ಪ್ರಕರಣದ ತನಿಖೆ ನಡೆಸಿದ ಅಂದಿನ ಪಿಎಸ್‍ಐ ಧಮೇರ್ಂದ್ರ ಅವರು ಆರೋಪಿ ಯೋಗೀಶ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಚಂದ್ರಕಾಂತ್ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ಹಲವು ರೀತಿಯಲ್ಲಿ ಯತ್ನಿಸಿದರೂ ಈವರೆಗೆ ಸಿಕ್ಕಿರಲಿಲ್ಲ. ಎಲ್‍ಪಿಸಿ (Long Pending Case) ಪ್ರಕರಣದ ಆರೋಪಿ ಚಂದ್ರಕಾಂತ್ ಮುಂಬೈನಲ್ಲಿ ಇರುವುದಾಗಿ ಸಣ್ಣ ಸುಳಿವು ಸಿಕ್ಕಿತು. ಮಾಹಿತಿಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿ ಮುಂಬೈನ ಅಂಧೇರಿಯಲ್ಲಿ ತನ್ನ ಸ್ವರೂಪ ಮರೆಮಾಚಿ ತರಕಾರಿ ವ್ಯಾಪಾರ ಮಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

chota rajan

ಛೋಟಾ ರಾಜನ್ ಸಹಚರನ ಸಹೋದರ ಈತ:
ಆರೋಪಿ ಚಂದ್ರಕಾಂತ್ ವಿರುದ್ಧ ಮುಂಬೈನಲ್ಲಿಯೂ ಹೊಡೆದಾಟ ಪ್ರಕರಣ ದಾಖಲಾಗಿದೆ. ಅಲ್ಲದೆ, ಈತನ ಸಹೋದರ ವಾಸುದೇವ ಯಾನೆ ವಾಮನ ಎಂಬಾತನು ಛೋಟಾ ರಾಜನ್‍ನ ಸಹಚರನಾಗಿದ್ದ. ಈತನನ್ನು 2004ರಲ್ಲಿ ಮುಂಬೈ ಪೊಲೀಸರು ಎನ್‍ಕೌಂಟರ್ ಮಾಡಿದ್ದರು ಎನ್ನುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದುಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನಿರ್ದೇಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ದಿನೇಶ್ ಕುಮಾರ್ ಬಾರಿಕೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಪಿಎಸ್‍ಐ ಪೂವಪ್ಪ, ಎಎಸ್‍ಐ ರಾಮ ಪೂಜಾರಿ, ಸಿಬ್ಬಂದಿ ರಶೀದ್ ಶೇಕ್, ಲಕ್ಷ್ಮಣ ಕಾಂಬ್ಳೆ, ಸಂತೋಷ ಡಿ.ಕೆ, ವಕೀಲ ಎನ್.ಲಮಾಣಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *