ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಳೆ ಆರ್ಭಟದಿಂದ ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ನಡುವೆ ಕಿರು ಹೊಳೆಯನ್ನು ದಾಟಲು ಹೋಗಿ ಅಂಗವಿಕಲ ವೃದ್ಧರೊಬ್ಬರು ಕೊಚ್ಚಿ ಹೋಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅವಂದೂರು ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಅವಂದೂರು ಗ್ರಾಮದ ಬೊಮ್ಮೇಗೌಡನ ಬಾಬಿ(70) ಕಿರು ಹೊಳೆಯಲ್ಲಿ ಕೊಚ್ಚಿಹೋದ ವೃದ್ಧ. ಇಂದು ಸಂಜೆ ಮನೆಯ ಸಮೀಪ ಇರುವ ಕಿರುಹೊಳೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅಯಾತಪ್ಪಿ ಕಿರುಹೊಳೆಗೆ ಬಿದ್ದಿದ್ದಾರೆ. ನೀರಿನ ಪ್ರಮಾಣ ಏರಿಕೆ ಅಗಿರುವುದರಿಂದ ಮೇಲೆ ಬರಲು ಸಾಧ್ಯವಾಗದೇ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಡಿಕೇರಿ-ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ
ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆ ಆರ್ಭಟ ಮುಂದುವರಿದ ಪರಿಣಾಮ ಕಾರ್ಯಾಚರಣೆ ಮಾಡಲು ತೊಡಕು ಉಂಟಾಗಿದ್ದು, ಕೊಚ್ಚಿಹೋದ ಬಾಬಿ ಅವರ ಪತ್ತೆಗಾಗಿ ಶೋಧ ಕಾರ್ಯ ಬೆಳಗ್ಗೆ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಸದ್ಯ ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.