ರಾಜಕಾರಣದಲ್ಲಿ ಸಿದ್ದರಾಮಯ್ಯ ನನ್ನ ಬದ್ಧ ವಿರೋಧಿ, ವೈಯುಕ್ತಿಕವಾಗಿ ಗೌರವವಿದೆ: ಶ್ರೀರಾಮುಲು

Public TV
1 Min Read
SRIRAMULU 1

ಚಿತ್ರದುರ್ಗ: ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಬದ್ಧ ವಿರೋಧಿ. ಆದರೆ ವೈಯುಕ್ತಿಕವಾಗಿ ಅವರೊಬ್ಬ ಹಿಂದುಳಿದ ವರ್ಗಗಳ ನಾಯಕ ಎಂಬ ಗೌರವವಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

SIDDARAMAIHA 6 medium

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಹಿರೇಹಳ್ಳಿ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕುರಿತ ಸಭೆ ಬಳಿಕ ಮಾತನಾಡಿದ ಶ್ರೀರಾಮುಲು ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಾವೆಲ್ಲಾ ಹಿಂದುಳಿದ ಸಮಾಜದಿಂದ ಬಂದವರು. ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕರು. ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವಂತಹ ವ್ಯಕ್ತಿ. ಅಂಥವರಿಗೆ ಗೌರವ ಕೊಡುವುದು ನಮ್ಮ ಸಂಪ್ರದಾಯ. ನಾನು ಸಿದ್ದರಾಮಯ್ಯ ಅವರನ್ನು ಗೌರವಿಸುತ್ತೇನೆ. ಆದರೆ ರಾಜಕಾರಣ ಅಂತ ಬಂದ ಸಮಯದಲ್ಲಿ ವಿರೋಧಿಸುತ್ತೇನೆ. ಅದರಲ್ಲಿ ಬೇರೆ ಪ್ರಶ್ನೆ ಇಲ್ಲ, ರಾಜಕಾರಣದಲ್ಲಿ ನಮ್ಮ ಪಕ್ಷ ಸಿದ್ಧಾಂತ ನಮ್ಮದು, ಅವರ ಪಕ್ಷ ಸಿದ್ಧಾಂತ ಅವರದ್ದು. ಆದರೆ ವ್ಯಕ್ತಿತ್ವ ಮತ್ತು ಹಿಂದುಳಿದ ಸಮಾಜದ ವಿಚಾರದಲ್ಲಿ ಅವರಿಗೆ ಆತ್ಮೀಯವಾಗಿ ಗೌರವ ನೀಡುತ್ತೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಾದಾಮಿ ಜನ ಒಳ್ಳೆಯವರು, ಚಾಮುಂಡೇಶ್ವರಿ ಜನ ಸೋಲಿಸಿಬಿಟ್ರು: ಸಿದ್ದರಾಮಯ್ಯ

sriramulu 2 medium

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯವಾಗಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದು ಸಿಎಂ ಅಭ್ಯರ್ಥಿಗಳು. ಇಲ್ಲ ಅಂದ್ರೆ ನೆಹರು ಕುಟುಂಬದವರು ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳು ಮಾತ್ರ ಸ್ಪರ್ಧಿಸುತ್ತಾರೆ. ಆದರೆ ಭಾರತೀಯ ಜನತಾ ಪಾರ್ಟಿಯು ಒಬ್ಬ ಸಾಮಾನ್ಯ ಕಾರ್ಯಕರ್ತ ಹಾಗೂ ವಾಲ್ಮೀಕಿ ಸಮಾಜದ ನನಗೆ ಎರಡು ಕಡೆ ಸ್ಪರ್ಧೆ ಮಾಡಲು ನನಗೆ ಅವಕಾಶ ನೀಡಿತ್ತು. ಆದರೆ ಬಾದಾಮಿಯಲ್ಲಿ ಬಹಳ ಕಡಿಮೆ ಮತಗಳಿಂದ ನಾನು ಸೋತಿದ್ದು, ಯಾರು ಯಾವಾಗ ಎಲ್ಲಿ ಜಯಶೀಲರು ಆಗುತ್ತಾರೆ ಎಂದು ಹೇಳೊಕೆ ಆಗುವುದಿಲ್ಲ. ಅಲ್ಲಿ ಸಿದ್ದರಾಮಯ್ಯ ಅವರ ನಸೀಬು ಚೆನ್ನಾಗಿತ್ತು. ಅವರ ಕ್ಷೇತ್ರದಲ್ಲಿ ಸೋತು ಬಾದಾಮಿಯಲ್ಲಿ ಗೆದ್ದರು. ಈಗ ಮತ್ತೆ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಲಿ, ಆದರೆ ನಾನು ಸ್ಪರ್ಧೆ ಮಾಡುವ ವಿಚಾರವನ್ನು ಆಯಾ ಸಂದರ್ಭದಲ್ಲಿ ನಮ್ಮ ಪಕ್ಷ ನಿರ್ಧರಿಸಲಿದೆ ಎಂದು ಸ್ಪಷ್ಟನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *