– ಮಲೆನಾಡಿನಲ್ಲಿ 10 ದಿನಗಳ ನಂತರ ಮತ್ತೆ ವರುಣನ ಅಬ್ಬರ
ಚಿಕ್ಕಮಗಳೂರು/ಬೀದರ್: ಶುಕ್ರವಾರ ಚಿಕ್ಕಮಗಳೂರು ಮತ್ತು ಬೀದರ್ ಜಿಲ್ಲೆಯ ಔರಾದ್ ನಲ್ಲಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೀದರ್ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಇತ್ತ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಸಂತಸದ ಜೊತೆ ಆತಂಕ ಸಹ ಹೆಚ್ಚಾಗಿದೆ.
ಮುಂಗಾರು ಮಳೆ ಆಶಾದಾಯಕವಾಗಿ ಆರಂಭವಾಗಿದ್ದರೂ ಕೂಡ ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಸಂಪೂರ್ಣ ಕ್ಷೀಣಿಸಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಭಾರೀ ಮಳೆ ಸುರಿದಿದೆ.
ಮಲೆನಾಡಿಗರಿಗೆ ಸಂತಸದ ಜೊತೆ ಆತಂಕ:
ಕಡುಗಟ್ಟಿದ ಮೋಡ, ಭಾರೀ ಗಾಳಿಯಿಂದ ಜಿಲ್ಲೆಯ ಮಲೆನಾಡು ಭಾಗಗಳಾದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಹಾಗೂ ಬಾಳೆಹೊನ್ನೂರು ಭಾಗದಲ್ಲಿ ಮಳೆಯಾಗಿದೆ. ಆದರೆ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬೈರಾಪುರ, ಚಾರ್ಮಾಡಿಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ಮಲೆನಾಡಿಗರು ಮತ್ತೆ ಆತಂಕಗೊಂಡಿದ್ದಾರೆ. ಜಿಲ್ಲೆಗೆ ಈ ಮಳೆ ಅಗತ್ಯವಿತ್ತು. ಬಯಲುಸೀಮೆ ಹಾಗೂ ಮಲೆನಾಡು ಭಾಗಕ್ಕೂ ಮಳೆ ತೀರಾ ಅವಶ್ಯಕವಿತ್ತು. ಮಲೆನಾಡು ಭಾಗದಲ್ಲಿ ಭತ್ತ ಬೆಳೆದಿದ್ದ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಭತ್ತದ ಸಿಸಿ ಮಡಿ ಬಿಸಿಲಿಗೆ ಬಾಡುವಂತಾಗಿತ್ತು. ಆದರೆ, ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಸಮೃದ್ಧ ಮಳೆಯಾಗಿರೋದು ಕಾಫಿ ಬೆಳೆಗಾರರರು ಹಾಗೂ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.
ಮಳೆ ಮಲೆನಾಡಿಗರಿಗೆ ಸಂತಸ ತಂದರೂ ಅದಕ್ಕಿಂತ ಹೆಚ್ಚು ಆತಂಕ ತರುತ್ತಿದೆ. ಏಕೆಂದರೆ, ಕಳೆದ ಎರಡು ವರ್ಷದಲ್ಲಿ ಅಳಿದುಳಿದ ಬದುಕು ಎಲ್ಲಿ ಈ ಬಾರಿ ಕೊಚ್ಚಿ ಹೋಗುತ್ತೋ ಎಂದು ಮಲೆನಾಡಿಗರು ಮಳೆ ಬಂದರೆ ಖುಷಿಯ ಮಧ್ಯೆಯೂ ಕಂಗಾಲಾಗುತ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ, ಮಳೆಗಾಲದಲ್ಲಿ ಆದ ಅನಾಹುತಕ್ಕೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಮಳೆರಾಯ ಏನೇನು ಅವಾಂತರ ಸೃಷ್ಟಿಸುತ್ತಾನೋ, ಸರ್ಕಾರ ಸೂಕ್ತ ಪರಿಹಾರ ಕೊಡುತ್ತೋ ಅಥವಾ ಆಶ್ವಾಸನೆಯಲ್ಲೇ ಕಾಲ ಕಳೆಯುತ್ತೋ ಎಂದು ಜನ ಮಳೆ-ಸರ್ಕಾರ ಎರಡರ ಬಗ್ಗೆಯೂ ಚಿಂತೆಗೀಡಾಗಿದ್ದಾರೆ. 2019ರಲ್ಲಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 6 ಕುಟುಂಬಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಅಲ್ಲಿಯ ಜನರಿಗೆ ಇಂದಿಗೂ ಸೂಕ್ತ ಹಾಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಹಾಗಾಗಿ, ಮಲೆನಾಡಿಗರಿಗೆ ಮಳೆ ಅಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಜಮೀನು, ಮನೆಗೆ ನುಗ್ಗಿದ ನೀರು:
ಬೀದರ್‌ನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಔರಾದ್ ತಾಲೂಕಿನ ಬೋರ್ಗಿ ಗ್ರಾಮದ ಜಗದೇವಿ ಎಂಬವರ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾವಿರಾರು ಮೌಲ್ಯದ ದವಸ ಧಾನ್ಯಗಳು ನೀರು ಪಾಲಾಗಿವೆ.
ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡರಾತ್ರಿ ಮನೆಗೆ ನೀರು ನುಗ್ಗಿ ನೀರು ಹೊರ ಹಾಕಲು ಕುಟುಂಬಸ್ಥರು ರಾತ್ರಿಯಿಡಿ ಹರಸಾಹಸ ಪಟ್ಟಿದ್ದಾರೆ. ಜೊತೆಗೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಔರಾದ್ ತಾಲೂಕಿನ ಜಮೀನುಗಳು ಜಲಾವೃತವಾಗಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿವೆ. ಅಲ್ಲದೇ ಸುರಿದ ಧಾರಾಕಾರ ಮಳೆಗೆ ಜೋಜನಾ ಬಳಿ ಇರುವ ಹಳ್ಳ ತುಂಬಿ ಜೋಜನಾ ಟು ಲಿಂಗದ ಹಳ್ಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂದು ಕೂಡಾ ದಟ್ಟ ಮೋಡ ಕವಿದ ವಾತಾವರಣವಿದ್ದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಹೀಗಾಗಿ ಜಿಲ್ಲೆಯಲ್ಲಿ 10 ರಿಂದ 13ರ ವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಧಾರಕಾರ ಮಳೆಗೆ ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿದೆ. ಒಳಚರಂಡಿ ವ್ಯವಸ್ಥೆ ಸೇರಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಸ್ಥಳೀಯ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ, ಸ್ಪಂದಿಸಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಳೆಯ ಅವಾಂತರದಿಂದಾಗಿ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನೂ ಓದಿ: ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ