ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕೋಟಿವೃಕ್ಷ ಸಂವರ್ಧನಾ ಅಭಿಯಾನ- ಶ್ರೀ ರಾಮುಲು ಚಾಲನೆ

Public TV
2 Min Read
ctd ramulu

ಚಿತ್ರದುರ್ಗ: ಬರದನಾಡು ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಹೊರವಲಯದಲ್ಲಿರುವ ಅಮೃತಮಹಲ್ ಕಾವಲಿನಲ್ಲಿ ಕೋಟಿ ವೃಕ್ಷ ಸಂವರ್ಧನಾ ಅಭಿಯಾನಕ್ಕೆ ಸಮಾಜಕಲ್ಯಾಣ ಸಚಿವ ಶ್ರೀ ರಾಮುಲು ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ದೇನಾಭಗತ್ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಸಂವರ್ಧನಾ ಅಭಿಯಾನವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಚಿವರು, ಕೋಟಿ ವೃಕ್ಷ ಸಂವರ್ಧನಾ ಅಭಿಯಾನದಿಂದ ಈ ಭಾಗದಲ್ಲಿ ಉತ್ತಮ ಗಾಳಿ ಹಾಗೂ ಪರಿಸರ ನಿರ್ಮಾಣವಾಗಲಿದ್ದು, ರೈತರಿಗೂ ಅನುಕೂಲವಾಗಲಿದೆ. ಅನಾದಿ ಕಾಲದಿಂದಲೂ ಮೊಳಕಾಲ್ಮೂರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬುಡಕಟ್ಟು ಸಮುದಾಯದವರು ದೇವರ ಎತ್ತುಗಳನ್ನು ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಿಯೂ ಕೂಡ ಇಂತಹ ಸಂಪ್ರದಾಯ ಕಂಡುಬರುವುದಿಲ್ಲ. ದೇವರ ಎತ್ತುಗಳ ಪೋಷಣೆಗಾಗಿ ಕಿಲಾರಿಗಳು ತಮ್ಮ ಜೀವನವನ್ನು ಸಮರ್ಪಣೆ ಮಾಡಿ, ಬುಡಕಟ್ಟು ಸಂಪ್ರದಾಯವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ctd ramulu 2 2 medium

ನಿವೃತ್ತ ಜಿಲ್ಲಾಧಿಕಾರಿ ಕೆ.ಅಮರನಾರಾಯಣ ಮಾತನಾಡಿ, 2021ರ ಜೂನ್ 16ರಲ್ಲಿ ಚಳ್ಳಕರೆ ತಾಲೂಕು ನಾಯಕನಹಟ್ಟಿ ಹೋಬಳಿ ರೇಖಲಗೆರೆ ಗ್ರಾಮದ ಸರ್ವೇ ನಂ1ರಲ್ಲಿ 1,501 ಎಕರೆ ಪ್ರದೇಶವನ್ನು ದೇನಾಭಗತ್ ಸೇವಾ ಟ್ರಸ್ಟ್‍ಗೆ 30 ವರ್ಷಗಳಿಗಾಗಿ ನಿರ್ವಹಣೆ ಮಾಡಲು ಕೊಟ್ಟಿದ್ದು, ಇದು ಯಾವುದೇ ರೀತಿಯ ಮಂಜೂರಾತಿ ಅಲ್ಲ. ಪರಿಸರ ಕಾಪಾಡುವ ದೃಷ್ಟಿಯಿಂದ ಅಮೃತ್ ಕಾವಲ್ ಭೂಮಿಯಲ್ಲಿ ವೃಕ್ಷ ಬೆಳೆಸುವುದು, ಔಷಧಿಯ ಗುಣಗಳ ಸಸ್ಯಗಳನ್ನು ಬೆಳೆಸುವುದು, ಹುಲ್ಲುಗಾವಲು ಅಭಿವೃದ್ಧಿ, ಮೇವು ಬೆಳೆಸುವುದು, ಮಳೆನೀರು ಕೊಯ್ಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅಮೃತ್ ಮಹಲ್ ರಾಸುಗಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಸತತವಾಗಿ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವುದು ಹಾಗೂ ಭೂಮಿಯ ಫಲವತ್ತತೆ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದರು.

ಪ್ರಸ್ತುತ ವಿನಾಶದ ಅಂಚಿನಲ್ಲಿರುವ ಅಮೃತ್ ಮಹಲ್ ತಳಿ ಸಂರಕ್ಷಣೆಗಾಗಿ ಈ ಪ್ರದೇಶವನ್ನು ಮೀಸಲಿರಿಸಲಾಗಿದೆ. ಯಾವುದೇ ಸಾರ್ವಜನಿಕ ವ್ಯಕ್ತಿ, ಜಾನುವಾರುಗಳಿಗೆ ಇಲ್ಲಿ ಪ್ರವೇಶ ನೀಡದೇ, ಅಮೃತ ಮಹಲ್ ಜಾನುವಾರುಗಳಿಗೆ ಹುಲ್ಲುಗಾವಲಿನಲ್ಲಿ ಮೇವು ಮೇಯಲು ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಸರ್ಕಾರ ನಿರ್ದೇಶಿಸಿದೆ ಎಂದು ಹೇಳಿದರು.

ctd ramulu 2 1 medium

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಸ್ತುತ 25 ಸಾವಿರ ಸಸಿಗಳನ್ನು ನೆಡಲು ಅನುಮೋದನೆ ನೀಡಿದ್ದು, ಈ ಪ್ರದೇಶದಲ್ಲಿ ನೆಟ್ಟ ಗಿಡಗಳನ್ನು ಮಕ್ಕಳಂತೆ ಕಾಪಾಡಲು ಎಲ್ಲ ರೀತಿಯ ಕ್ರಮಗಳನ್ನು ಟ್ರಸ್ಟ್ ಮಾಡಲಿದೆ. ನೆಟ್ಟ ಗಿಡಗಳಿಗೆ ಕಾಲ ಕಾಲಕ್ಕೆ ನೀರುಣಿಸಲು ಅನುಕೂಲವಾಗಲು ವಿಧಾನ ಪರಿಷತ್ ಸದಸ್ಯರಾದ ಕೆ.ಗೋವಿಂದರಾಜು ಅವರು ಟ್ರ್ಯಾಕ್ಟರ್ ಹಾಗೂ ಟ್ಯಾಂಕರ್‍ಗಾಗಿ 10 ಲಕ್ಷ ರೂ.ಗಳನ್ನು ಈ ಕಾರ್ಯಕ್ರಮಕ್ಕೆ ಮಂಜೂರು ಮಾಡಿದ್ದಾರೆ ಎಂದರು.

ಎಲ್ಲಿ ಪೋಷಣೆ, ರಕ್ಷಣೆ ಇದೆಯೋ ಅಲ್ಲಿ ವೃಕ್ಷಗಳು ಹೆಚ್ಚು ಬೆಳೆಯುತ್ತವೆ. ನಿರ್ಲಕ್ಷಿಸಿದರೆ ಹಣ ವ್ಯಯವಾಗುತ್ತದೆಯೇ ಹೊರತು ಯಾವುದೇ ಫಲ ದೊರೆಯುವುದಿಲ್ಲ. ಈ ಭಾಗದ ಜನರಿಗೆ ಉದ್ಯೋಗ, ಆರ್ಥಿಕ ಸುಭದ್ರತೆ, ಉತ್ತಮ ಗಾಳಿ, ವಾತಾವರಣ ನಿರ್ಮಿಸಲು ಕೋಟಿ ವೃಕ್ಷಗಳು ನೆರವಾಗಲಿವೆ. ಬರದ ನಾಡನ್ನು ಬನದ ನಾಡನ್ನಾಗಿ ಪರಿವರ್ತಿಸುವುದೇ ನಮ್ಮ ಗುರಿ. ಅಮೃತ ಮಹಲ್ ತಳಿಯನ್ನು ಉಳಿಸುವುದೊಂದೆ ನಮ್ಮ ಟ್ರಸ್ಟ್‍ನ ಅಚಲ ನಿರ್ಧಾರವಾಗಿದೆ ಎಂದು ಹೇಳಿದರು.

ctd ramulu 3 medium

ಕಾರ್ಯಕ್ರಮದಲ್ಲಿ ದೇನಾಭಗತ್ ಗುರೂಜಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ತಹಶೀಲ್ದಾರ್ ಮಲ್ಲಿಕಾರ್ಜುನ್, ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ಚೋಳರಾಜನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಕಾಟಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *