ಬೆಂಗಳೂರು: ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ ‘ಕಿಸಾನ್ ರೈಲಿ’ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಬೆಂಗಳೂರು ನಗರದ ಯಲಹಂಕ ರೈಲು ನಿಲ್ದಾಣದಲ್ಲಿ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ಪ್ರಮುಖ ಪಾತ್ರ ವಹಿಸಿದೆ. ಕೃಷಿ ಉತ್ಪನ್ನಗಳಿಗೆ ದೂರದ ಮಾರುಕಟ್ಟೆಗಳ ಸಂಪರ್ಕ ಸಿಗುವಂತೆ ಮಾಡಿ ರೈತರ ಆದಾಯ ಹೆಚ್ಚಿಸಲು ಮಹತ್ವದ ಪಾತ್ರ ವಹಿಸಿದೆ ಎಂದರು. ಕಿಸಾನ್ ರೈಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಿಎಂ ಅರ್ಪಿಸಿದರು.
ಕಿಸಾನ್ ರೈಲು ಆಗಸ್ಟ್ 2020ರಿಂದ ಪ್ರಾರಂಭಗೊಂಡಿದ್ದು, ರೈತರಿಗೆ, ಕೃಷಿ ಉತ್ಪನ್ನದ ವರ್ತಕರಿಗೆ, ರಫ್ತುದಾರರಿಗೆ ಪ್ರಯೋಜನಕಾರಿಯಾಗಿದೆ ಎಂದರು. ಕಿಸಾನ್ ರೈಲಿನಲ್ಲಿ ಕೃಷಿ ಉತ್ಪನ್ನಗಳ ರೈಲ್ವೆ ಸಾಗಾಣಿಕೆ ದರದಲ್ಲಿ ಶೇ 50ರಷ್ಟು ರಿಯಾಯಿತಿ ದೊರೆಯುತ್ತದೆ. ಇದರಿಂದ ರೈತರಿಗೆ ರಸ್ತೆ ಮೂಲಕ ಸಾಗಾಣಿಕೆ ಮಾಡಿದ್ದಕಿಂತಲೂ ಅತ್ಯಂತ ಕಡಿಮೆ ದರದಲ್ಲಿ ಸಾಗಾಣಿಕೆ ಮಾಡಲು ಅನುಕೂಲವಾಗಿದೆ ಎಂದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕಾ ಸಚಿವ ಆರ್.ಶಂಕರ್, ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ರವರು ಉಪಸ್ಥಿತರಿದ್ದರು. ಬೆಂಗಳೂರು ರೈಲ್ವೆ ವಿಭಾಗದ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ, ಕೃಷಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಅವರು ಇತರ ಹಿರಿಯ ಅಧಿಕಾರಿಗಳು ಇದ್ದರು.
ಜೂನ್ 21, 2021 ರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ 5 ಕಿಸಾನ್ ರೈಲು ಸೇವೆಗಳ ಮೂಲಕ 1250 ಟಾನ್ ಮಾವನ್ನು ದೆಹಲಿಗೆ ಸಾಗಾಣಿಕೆ ಮಾಡಲಾಗಿದೆ.
ಕಿಸಾನ್ ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸುವುದರಿಂದ ಶೀಘ್ರವಾಗಿ ದೇಶದಾದ್ಯಂತ ಸೂಕ್ತ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲವಾಗುವುದು. ಕೋಲಾರದಿಂದ ದೆಹಲಿಗೆ ಸುಮಾರು 2,300 ಕಿ ಮೀ ದೂರವನ್ನು ಕೇವಲ 38-40 ಗಂಟೆಗಳಲ್ಲಿ ತಲುಪುವುದರಿಂದ ಹಣ್ಣಿನ ತಾಜಾತನವೂ ಉಳಿಯುತ್ತದೆ. ಕಿಸಾನ್ ರೈಲು ರೈತರ ಬೆಳೆಗಳನ್ನು ಸುರಕ್ಷಿತವಾಗಿ, ಬೇಡಿಕೆಯಿರುವ ಮಾರುಕಟ್ಟೆಗೆ ಸಾಗಾಣಿಕೆ ಮಾಡುವಲ್ಲಿ ಸಹಾಯಕವಾಗಿದೆ.
ಮುಖ್ಯಮಂತ್ರಿ @BSYBJP ರವರು ಇಂದು ಚಿಂತಾಮಣಿಯಿಂದ ನವದೆಹಲಿಗೆ 250 ಟನ್ ಮಾವು ಸಾಗಿಸುವ "ಕಿಸಾನ್ ರೈಲಿಗೆ" ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. (1/2)#KisanRail @PMOIndia @RailMinIndia @PiyushGoyal pic.twitter.com/mRQ3hQm57Y
— CM of Karnataka (@CMofKarnataka) June 29, 2021